ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ನವೆಂಬರ್ 10, 2017

ಅಸೂಯೆಗೆ ಮದ್ದೇನು?


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ
ಕಂಡವರನು ಸುಡುವನು ಅಸೂಯಾಪರ |
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡೆ ಸಲ್ಲಾಪ ಮೂಢ ||
     ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಕಾರಿಯಾಗಿರುವ ಜಠರಾಗ್ನಿಯನ್ನು ವೈಶ್ವಾನರ ಎನ್ನುತ್ತಾರೆ. ವೈಶ್ವಾನರ ತಿಂದ ಆಹಾರವನ್ನು ಜೀರ್ಣಿಸಿದರೆ, ಅಸೂಯೆಯಿಂದ ನರಳುವವನು ಕಂಡ ಕಂಡವರನ್ನೆಲ್ಲಾ ಸುಡುತ್ತಾನೆ. ಮಂಕರೊಡನೆ ಮೌನವಾಗಿರುವುದಾದರೂ ಒಳ್ಳೆಯದು, ಆದರೆ ಮತ್ಸರಿಸುವವರೊಂದಿಗೆ ಸ್ನೇಹವೂ ಅಪಾಯಕಾರಿಯೇ ಸರಿ. ಈ ಅಸೂಯೆ ಒಂದು ಋಣಾತ್ಮಕ ಗುಣ. ಮನುಷ್ಯನನ್ನು ಕುಬ್ಜನನ್ನಾಗಿಸುವ ಈ ಗುಣ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ, ಪ್ರಮಾಣ ಹೆಚ್ಚು ಕಡಿಮೆಯಿರಬಹುದು. ಯಾರಾದರೂ ತಾನು ಪಡೆದುಕೊಳ್ಳಬಯಸುವ ಗುಣ, ಸಾಧನೆ, ಗೌರವ, ವಸ್ತು, ಇತ್ಯಾದಿಗಳನ್ನು  ತನಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದರೆ ಮತ್ತು ತನಗೆ ಅದು ಸಾಧ್ಯವಾಗದಿದ್ದ ಸಂದರ್ಭಗಳಲಿ ಅಸೂಯೆ ತಲೆ ತೂರಿಸುತ್ತದೆ ಮತ್ತು ಆ ರೀತಿ ಹೊಂದಿದಾತ ಅವುಗಳನ್ನು ಕಳೆದುಕೊಳ್ಳಬೇಕೆಂದು ಬಯಸುತ್ತದೆ ಮತ್ತು ಅವನ ನಾಶವನ್ನು ಬಯಸುತ್ತದೆ. ತನಗೆ ಸಾಧ್ಯವಾಗದಿದ್ದುದು ಅವನಿಗೂ ಸಾಧ್ಯವಾಗಬಾರದು ಎಂದು ಕುತ್ಸಿತ ಕ್ರಿಯೆಗಳನ್ನು ಮಾಡಲು, ಅಡ್ಡಿ ಮಾಡಲು ಪ್ರೇರಿಸುತ್ತದೆ. ಸಾಧಕರು ಮಾತ್ರ ಇಂತಹ ಭಾವನೆಗಳಿಂದ ದೂರವಿದ್ದು ಸತತ ಪ್ರಯತ್ನ, ಶ್ರಮಗಳಿಂದ ತಮ್ಮ ಸಾಧನೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ, ಜೀವನದ ಎಲ್ಲಾ ರಂಗಗಳಲ್ಲಿ, ಕ್ಷೇತ್ರಗಳಲ್ಲಿ ಅಸೂಯಾಪರರು ಸಾಮಾನ್ಯವಾಗಿ ಕಂಡುಬರುತ್ತಾರೆ.
     ಅಸಂತೋಷದ ಬಲಿಷ್ಠವಾದ ಕಾರಣವೇ ಅಸೂಯೆ. ಅಸೂಯೆಯ ಕಾರಣದಿಂದ ಅಸಂತುಷ್ಟನಾಗಿರುವ ವ್ಯಕ್ತಿ ಇತರರೂ ಅಸಂತೋಷದಿಂದ ನರಳಬೇಕು, ಅವರಿಗೆ ಕೆಡುಕಾಗಬೇಕು ಎಂದು ಹಂಬಲಿಸುತ್ತಾನೆ. ಮನೋವಿಶ್ಲೇಷಕರು ಇತ್ತೀಚೆಗೆ ಎರಡು ವಿಧದ ಅಸೂಯೆಗಳಿದ್ದು, ಒಂದು ದುರುದ್ದೇಶದ ಮತ್ತು ಇನ್ನೊಂದು ಪ್ರೇರಕ ಅಸೂಯೆಯೆಂದು ಗುರುತಿಸಿದ್ದಾರೆ. ದುರುದ್ದೇಶದ ಅಸೂಯೆ ಹೊಂದಿರುವವರು ಯಾರ ಬಗ್ಗೆ ಅಸೂಯೆ ಹೊಂದಿದ್ದಾರೋ ಅವರ ಪತನವನ್ನು ಬಯಸುತ್ತಾರೆ ಮತ್ತು ಅವರ ನೋವು, ದುಃಖಗಳನ್ನು ಸಂಭ್ರಮಿಸುವ ಮನೋಭಾವದವರಾಗಿರುತ್ತಾರೆ. ಇನ್ನೊಂದು ರೀತಿಯವರಿಗೆ ತಾವೂ ಅವರಂತೆಯೇ ಆಗಬೇಕೆಂದು ಪ್ರಯತ್ನಿಸಲು ಅಸೂಯೆ ಪ್ರೇರಕವಾಗುತ್ತದೆ.
     ತಾನು ಹೊಂದಿಲ್ಲದ ಐಷಾರಾಮಿ ಕಾರನ್ನು ಪಕ್ಕದ ಮನೆಯವನು ಹೊಂದಿರುವುದು, ತಾನು ಬಯಸಿದ ಹುದ್ದೆಯಲ್ಲಿ ಇನ್ನೊಬ್ಬರು ಇರುವುದು, ತನಗಿಲ್ಲದ ಪ್ರಾಧಾನ್ಯತೆ ಇನ್ನೊಬ್ಬರಿಗೆ ಸಿಗುವುದು, ಯಾವುದೋ ಸಂಘ-ಸಂಸ್ಥೆಯ ಪದಾಧಿಕಾರ ತನಗೆ ಸಿಗದೆ ಇನ್ನೊಬ್ಬರ ಪಾಲಾಗುವುದು ಅಸೂಯೆ ಹುಟ್ಟಲು ಕಾರಣಗಳಾಗುತ್ತವೆ. ನಾನು ಸರ್ಕಾರಿ ಸೇವೆಯಲ್ಲಿದ್ದ ಸಂದರ್ಭದಲ್ಲಿ ನನಗೆ ವರ್ಗಾವಣೆ ಆಗಿದ್ದ ಸ್ಥಳಕ್ಕೆ ಪ್ರಯತ್ನಿಸಿದ್ದ ನನ್ನ ಮಿತ್ರ ಅಧಿಕಾರಿ ನನ್ನ ಮೇಲೆ ವಿನಾಕಾರಣ ದ್ವೇಷ ಸಾಧಿಸತೊಡಗಿದ್ದುದು ನನಗೆ ಆಶ್ಚರ್ಯವಾಗಿತ್ತು. ನಾನು ಬಯಸಿ ಆ ಸ್ಥಳಕ್ಕೆ ಬಂದಿಲ್ಲವೆಂದು, ಬೇಕಿದ್ದರೆ ಇದೇ ಹುದ್ದೆಗೆ ಪ್ರಯತ್ನಿಸಿ ಹಾಕಿಸಿಕೊಳ್ಳಲು ಆತನಿಗೆ ಹೇಳಿದುದನ್ನೂ ಆತ ತಪ್ಪಾಗಿಯೇ ಭಾವಿಸಿದ್ದ. ಅಸೂಯೆ ಬುದ್ಧಿಗೆ ಮಂಕು ಕವಿಸುತ್ತದೆ ಮತ್ತು ಮಿತ್ರತ್ವವನ್ನೂ ನಾಶಪಡಿಸುತ್ತದೆ. ಈ ಅಸೂಯೆಯನ್ನು ನಿಯಂತ್ರಿಸುವ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡ್ತಿ ಸೂಕ್ತ ಪರಿಹಾರಗಳನ್ನು ಮನೋವಿಜ್ಞಾನಿಗಳು ಸೂಚಿಸುವುದು ಅಗತ್ಯವಾಗಿದೆ. ಇಂತಹ ವಿಷಯದಲ್ಲಿ ಯಾರೂ ಆಪ್ತ ಸಮಾಲೋಚಕರ ಸಲಹೆ ಪಡೆಯುವುದಕ್ಕೆ ಹೋಗುವುದಿಲ್ಲ. ಅಸೂಯಾಪರರು ಇತರರು ತಮ್ಮ ಬಗ್ಗೆ ಅಸೂಯೆ ಹೊಂದಿದ್ದಾರೆಂದು ಭಾವಿಸುತ್ತಾರೆ. ತಾವು ಅವರಿಗಿಂತ ಮೇಲಿನವನು ಎಂಬ ಭಾವನೆ ಹೊಂದಿದ ಅಸೂಯಾಪರ ತನ್ನ ಪ್ರತಿಸ್ಪರ್ಧಿಯ ಬಲವನ್ನು ಕುಗ್ಗಿಸಲು ಕೀಳು ಪ್ರಯತ್ನವನ್ನೂ ಮಾಡಲು ಹೇಸುವುದಿಲ್ಲ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ |
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ ||
     'ಇತರರ ಒಳ್ಳೆಯ ಅಭಿವೃದ್ಧಿಯನ್ನು ಕಂಡು ಅನುಭವವಾಗುವ ನೋವೇ ಅಸೂಯೆ' ಎಂದು ಅರಿಸ್ಟಾಟಲ್ ಹೇಳಿರುವುದು ಅರ್ಥವತ್ತಾಗಿದೆ. ಇನ್ನೊಬ್ಬರಿಗಿಂತ ಹೆಚ್ಚು ಅಥವ ಮೇಲು ಅನ್ನಿಸುವ ಎಷ್ಟೋ ಸಂಗತಿಗಳು ಇದ್ದರೂ, ಯಾವುದೋ ಒಂದರಲ್ಲಿ ಇನ್ನೊಬ್ಬರು ತನಗಿಂತ ಮೇಲಾಗಿದ್ದರೆ ಅದು ಅಸಹನೆಗೆ ಕಾರಣವಾಗಿಬಿಡುತ್ತದೆ. ಇದು ಇರುವ ಸಂತೋಷವನ್ನೂ ಕಿತ್ತುಕೊಳ್ಳುತ್ತದೆ. ಮನುಷ್ಯನ ವೈರಿಯಾದ ಮತ್ಸರ ಯಾವುದೇ ರೀತಿಯ ಒಳಿತನ್ನು ಮಾಡದ, ಕೆಡುಕನ್ನೇ ತರುವ ಋಣಾತ್ಮಕ ಗುಣವಾಗಿದೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ವೈರಿಯ ಎರಡು ಕಣ್ಣೂ ಹೋಗಲಿ ಎಂದು ಬಯಸುವುದೇ ಈ ಮತ್ಸರ. ಇದು ಮಾನವ ಸಂಬಂಧಗಳಲ್ಲಿ ಋಣಾತ್ಮಕ ಚಿಂತನೆಗಳಿಂದ, ಅಭದ್ರತೆಯ ಭಾವನೆಯಿಂದ, ಮುಂದೆ ತಮಗೆ ಹಿನ್ನಡೆಯಾಗಬಹುದು ಎಂಬ ಅನಿಸಿಕೆ, ಇತ್ಯಾದಿಗಳಿಂದ ಉಂಟಾಗುವ ಒಂದು ಮನೋಸ್ಥಿತಿ. ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಮತ್ಸರ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿಬಿಟ್ಟಿತ್ತು. ನಿಜಜೀವನದಲ್ಲೂ ಇಂತಹ ರಾಮಾಯಣ, ಮಹಾಭಾರತಗಳು, ಇತಿಹಾಸದ ನೆರಳುಗಳು ನೋಡಸಿಗುತ್ತವೆ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಅಸೂಯೆ ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಅರಸುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಇತರರ ಮೇಲೆ ಪರಿಶೋಧನೆಯ ದೃಷ್ಟಿ ಬೀರುವುದನ್ನು ನಿಲ್ಲಿಸಿ ನಮ್ಮೊಳಗೆ ನಾವು ಕಣ್ಣು ಹಾಯಿಸಿಕೊಳ್ಳಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು, ಕಳೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಮತ್ಸರ ನಮ್ಮ ಬೆಳವಣಿಗೆಯನ್ನು ತಿನ್ನುತ್ತಿತ್ತೆಂಬ ಅರಿವು ಬರುವುದು ಆಗಲೇ. ಒಂದು ಮಾತನ್ನು ನೆನಪಿಡಬೇಕು, ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ. ಎತ್ತರವಾಗಿರುವ ಮರವನ್ನು, ಪರ್ವತಗಳನ್ನು ಬಿರುಗಾಳಿ ಬಾಧಿಸುತ್ತದೆ ಅಲ್ಲವೇ?
     ವೇದದ ಈ ಕರೆ ನಮ್ಮನ್ನು ಎಚ್ಚರಿಸಲಿ: ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪) ಅರ್ಥ: ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅಸೂಯೆ ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ.
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ