ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಅಕ್ಟೋಬರ್ 13, 2017

ಜೀವನ ಗೊಂಬೆಯಾಟವಲ್ಲ!


     ಅಯ್ಯೋ, ನಮ್ಮದೇನಿದೆ?, ಎಲ್ಲಾ ಭಗವಂತ ಆಡಿಸಿದ ಹಾಗೆ! ಅವನ ಕೈಯಲ್ಲಿ ಆಡೋ ಗೊಂಬೆಗಳು ನಾವು, ಅವನ ಇಚ್ಛೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ಇದು ಸರಿಯೇ? ಇದರ ಗೂಢಾರ್ಥವೇನಿರಬಹುದು? ವಿಚಾರ ಮಾಡೋಣ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ದೇವರೇ ಕಾರಣವೆಂದರೆ ನಮ್ಮ ತಪ್ಪು ಏನಿರುತ್ತದೆ? ಯಾರನ್ನಾದರೂ ಕೊಲೆ ಮಾಡಿದರೆ ಅದಕ್ಕೂ ದೇವರೇ ಕಾರಣ ಎನ್ನಬಹುದಲ್ಲವೇ? ದೇವರು ಮಾಡಿಸಿದ ಕೆಲಸಕ್ಕೆ ಶಿಕ್ಷೆ ದೇವರಿಗೆ ಕೊಡಬೇಕೇ ಹೊರತು ನಿಮಿತ್ತ ಮಾತ್ರವಾಗಿ ಕೊಲೆ ಮಾಡಿದವರಿಗೆ ಶಿಕ್ಷೆ ಏಕೆ ಕೊಡಬೇಕು? ಹೀಗಿರುವಾಗ ಧರ್ಮ, ಅಧರ್ಮ, ಸತ್ಯ, ಅಸತ್ಯ, ಪಾಪ, ಪುಣ್ಯ, ಮೋಕ್ಷ, ಸ್ವರ್ಗ, ನರಕ ಮುಂತಾದುವುಗಳಿಗೆ ಅರ್ಥವಾದರೂ ಎಲ್ಲಿ ಬರುತ್ತದೆ?
     ಕೆಲವರು ಬಡವರಾಗಿ ಹುಟ್ಟುತ್ತಾರೆ, ಕೆಲವರು ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ, ಕೆಲವರು ಹುಟ್ಟುತ್ತಲೇ ಅಂಗವಿಕಲರಾಗಿರುತ್ತಾರೆ, ಕೆಲವರು ರೋಗಿಷ್ಠರಾಗಿರುತ್ತಾರೆ. ಕೆಲವರು ದುಃಖಿಗಳಾಗಿರುತ್ತಾರೆ, ಕಷ್ಟಪಡುತ್ತಾರೆ, ಕೆಲವರು ಸುಖ-ಸಂತೋಷಗಳಲ್ಲಿ ಮುಳುಗಿರುತ್ತಾರೆ. ಕಂಡ ಕೂಡಲೇ ಹೊಡೆದು ಸಾಯಿಸಲ್ಪಡುವ ಸೊಳ್ಳೆಗಳಿರುತ್ತವೆ, ಬೆಕ್ಕಿನ ಭಯದ ಇಲಿ, ನಾಯಿಯ ಭಯದ ಬೆಕ್ಕುಗಳು ಜನ್ಮ ತಾಳುತ್ತವೆ. ಇಂತಹ ಜೀವಿಗಳನ್ನು ದೇವರೇ ಸೃಷ್ಟಿಸಿದ ಎಂದರೆ ಅವನನ್ನು ಪಕ್ಷಪಾತಿ, ಅನ್ಯಾಯಿ, ನಿಷ್ಕರುಣಿ ಅನ್ನದಿರಲು ಸಾಧ್ಯವಿದೆಯೇ? ದೇವರನ್ನು ಪಕ್ಷಪಾತಿ ಎಂದು ಹೇಳಲು ಮನಸ್ಸು, ಅದರಲ್ಲೂ ಆಸ್ತಿಕ ಮನಸ್ಸು, ಒಪ್ಪುವುದಿಲ್ಲ. ಹಾಗಾದರೆ ಈ ರೀತಿಯ ಜೀವಿಗಳು ಸೃಷ್ಟಿಯಾಗಲು ಮತ್ತೇನೋ ಕಾರಣವಿರಲೇಬೇಕು. ಕರ್ಮಸಿದ್ಧಾಂತ ಮತ್ತು ಪುನರ್ಜನ್ಮದ ಸಿದ್ಧಾಂತಗಳು ಕೆಲಮಟ್ಟಿಗೆ ಇಂತಹುದಕ್ಕೆ ಉತ್ತರ ನೀಡಬಲ್ಲುದಾಗಿವೆ. ಇನ್ನೊಂದು ಉದಾಹರಣೆಯನ್ನು ನೋಡೋಣ. ಇಬ್ಬರು ಆಟಗಾರರು ಪರಸ್ಪರ ಮುಖಾಮುಖಿಯಾದಾಗ ಒಬ್ಬ ಗೆಲ್ಲುತ್ತಾನೆ, ಇನ್ನೊಬ್ಬ ಸೋಲುತ್ತಾನೆ. ಒಬ್ಬ ಸೋಲಲು ಅಥವ ಇನ್ನೊಬ್ಬ ಗೆಲ್ಲಲು ದೇವರು ಕಾರಣನೇ? ಆಟಗಾರರ ಪಾತ್ರ ಏನೂ ಇರುವುದಿಲ್ಲವೇ? ದೇವರೇ ಕಾರಣ ಎನ್ನುವುದಾದರೆ ಸೋಲಿನಿಂದ ಹತಾಶೆಗೊಳ್ಳುವುದಕ್ಕೆ ಅಥವ ಗೆಲುವಿನಿಂದ ಬೀಗುವುದಕ್ಕೆ ಅರ್ಥ ಇರುವುದಿಲ್ಲ. ಆಟಗಾರರೇ ಕಾರಣವೆಂದಾದರೆ ಇಲ್ಲಿ ದೇವರ ಪಾತ್ರ ಏನಿರಬಹುದು?
     ಇಷ್ಟೆಲ್ಲಾ ಚರ್ಚೆ ಮಾಡುತ್ತೀವಲ್ಲಾ, ಆ ದೇವರ ಬಗ್ಗೆ ನಮಗೆ ಯಾರಿಗಾದರೂ ಸ್ಪಷ್ಟವಾಗಿ ತಿಳಿದಿದೆಯೇ? ನಮ್ಮ ಸೀಮಿತ ಬುದ್ಧಿಮತ್ತೆಯ ಮಿತಿಯಲ್ಲಿ ನಾವು ಏನು ಭಾವಿಸುತ್ತೇವೆಯೋ ಅದೇ ಮತ್ತು ಅಷ್ಟೇ ದೇವರಾಗಿರಲಿಕ್ಕಿಲ್ಲ. ಒಂದು ಸಾಮಾನ್ಯವಾದ ರಬ್ಬರಿನ ಚೆಂಡನ್ನು ಯಾವುದೇ ಆಧಾರವಿಲ್ಲದೆ ಶೂನ್ಯದಲ್ಲಿ ನಿಲ್ಲಿಸಲು ನಮಗೆ ಸಾಧ್ಯವಿದೆಯೇ? ಇದನ್ನೇ ಆಧಾರವಾಗಿರಿಸಿಕೊಂಡು ನೋಡೋಣ. ವಿಶಾಲವಾದ ನಮ್ಮ ಭೂಮಿ ನಿಂತಿರುವುದಾದರೂ ಎಲ್ಲಿ? ಸೂರ್ಯ, ಚಂದ್ರ, ವಿವಿಧ ಗ್ರಹಗಳು, ನಕ್ಷತ್ರಗಳು, ಆಕಾಶಕಾಯಗಳು ನಿಗದಿತ ಸ್ಥಳಗಳಲ್ಲಿ ಯಾವುದರ ಆಧಾರದಲ್ಲಿ ನೆಲೆಗೊಳಿಸಲ್ಪಟ್ಟಿವೆ? ಇವನ್ನೆಲ್ಲಾ ಒಂದು ಸೂತ್ರದಲ್ಲಿ ಬಂಧಿಸಿ ಇರಿಸಿರುವ ಶಕ್ತಿಯಾದರೂ ಯಾವುದು? ಆ ಶಕ್ತಿಯಾದರೂ ಹೇಗಿದ್ದೀತು? ಇಂತಹ ಬೃಹತ್ ಬ್ರಹ್ಮಾಂಡವನ್ನು ಸ್ಥಿತಿಯಲ್ಲಿಡುವ ಕೆಲಸ ಬೃಹತ್ ಶಕ್ತಿಯಿಂದ ಮಾತ್ರ ಸಾಧ್ಯ. ಅದನ್ನೇ ದೇವರು ಅಂದುಕೊಳ್ಳೋಣ. ಅಂತಹ ಬೃಹತ್ ಸರ್ವಶಕ್ತ, ಸರ್ವವ್ಯಾಪಿ, ಸರ್ವಾಧಾರಕನನ್ನು ನಾವು ಮಾನವರು ನಮ್ಮ ಗುಣಸ್ವಭಾವಕ್ಕನುಗುಣವಾಗಿ ಮಾನವರ ರೂಪದಲ್ಲಿ ಕಲ್ಪಿಸಿಕೊಂಡರೆ ಅದು ಆ ಸರ್ವಶಕ್ತಿಗೆ ಸಲ್ಲಿಸುವ ಗೌರವವಂತೂ ಆಗದು. ದೈವಿಕ ಗುಣಗಳು, ಅಸಾಮಾನ್ಯ ಶಕ್ತಿ ಹೊಂದಿರುವ ಮಹಾತ್ಮರನ್ನು ದೇವಮಾನವರೆನ್ನಬಹುದೇ ಹೊರತು ಅವರನ್ನು ದೇವರಿಗೆ ಸಮೀಕರಿಸಲಾಗದು. ಇರಲಿ ಬಿಡಿ, ಎಲ್ಲರ ವಿಚಾರವೂ ಒಂದೇ ರೀತಿ ಇರುವುದಿಲ್ಲ. ಲೋಕೋ ಭಿನ್ನರುಚಿಃ! ಅಲ್ಲದೆ, ದೇವರು ಆಕಾರಿಯೋ, ನಿರಾಕಾರಿಯೋ ಎಂಬುದು ಈ ಲೇಖನದ ಚರ್ಚೆಯ ವಿಷಯವಲ್ಲವಾದುದರಿಂದ ಇದನ್ನು ಬಿಟ್ಟು ಮುಂದೆ ಹೋಗೋಣ.
     ನಾವು ದೇವರನ್ನು ನೆನಪಿಸಿಕೊಳ್ಳುವುದು ಕಷ್ಟ ಬಂದಾಗ ಮಾತ್ರ. ನಮಗೆ ಕಷ್ಟಗಳೇ ಇರದಿದ್ದರೆ, ಸುಖ, ಸಂತೋಷಗಳೇ ಬದುಕಿನಲ್ಲಿ ತುಂಬಿದ್ದರೆ ದೇವರ ನೆನಪೂ ಆಗುವುದಿಲ್ಲ. ಕಟ್ಟಿದ ದೊಡ್ಡ ಬಂಗಲೆ, ಐಷಾರಾಮಿ ಕಾರು, ದೊಡ್ಡ ಆಸ್ತಿಗೆ ಒಡೆಯರಾದುದು ಸ್ವಂತ ಪರಿಶ್ರಮದ ಫಲದಿಂದ ಎಂದು ಅಂದುಕೊಳ್ಳುವ ನಾವು ವಹಿವಾಟಿನಲ್ಲಿ ದೊಡ್ಡ ನಷ್ಟವಾಗಿ ಎಲ್ಲವನ್ನೂ ಕಳೆದುಕೊಳ್ಳುವ ಹಂತ ಬಂದಾಗ ಮಾತ್ರ ದೇವರನ್ನು ನಿಷ್ಕರುಣಿ ಎಂದುಬಿಡುತ್ತೇವೆ. ದೇವರು ಕಣ್ಣು ಬಿಟ್ಟು ನಮ್ಮನ್ನು ನೋಡಲಿಲ್ಲ, ಕಾಪಾಡಲಿಲ್ಲ ಎಂದು ಅಲವತ್ತುಕೊಳ್ಳುತ್ತೇವೆ. ದೇವರ ಕೆಲಸ ನಮಗೆ ತೊಂದರೆ ಬರದಂತೆ ನೋಡಿಕೊಳ್ಳುವುದೇ? ನಾವು ಏನೇ ಮಾಡಿದರೂ ದೇವರು ನಮ್ಮನ್ನು ರಕ್ಷಿಸಬೇಕೇ? ನಮ್ಮ ಆಲೋಚನಾ ಸರಣಿ ದಾರಿ ತಪ್ಪುವುದು ಇಲ್ಲಿಯೇ! ಸಕಲ ಚರಾಚರ ಜೀವಿಗಳು, ಪ್ರಕೃತಿ, ಬೃಹತ್ ಬ್ರಹ್ಮಾಂಡ ಎಲ್ಲವೂ ನಿರ್ದಿಷ್ಟ ಸೂತ್ರಗಳ ಅನುಸಾರ ಅಸ್ತಿತ್ವದಲ್ಲಿವೆ. ಈ ಅಸ್ತಿತ್ವಕ್ಕೆ ಹಲವಾರು ಸೂತ್ರಗಳಿವೆ. ಆ ಸೂತ್ರಕ್ಕೆ ಅನುಸಾರವಾಗಿಯೇ ಎಲ್ಲವೂ ನಡೆಯುತ್ತವೆ. ಒಂದು ಸಣ್ಣ ಉದಾಹರಣೆ ನೋಡೋಣ. ಬೆಂಕಿಯ ಗುಣ ಸುಡುವುದು. ಅದು ದೇಶ, ಕಾಲ ಅನುಸರಿಸಿ ಬದಲಾಗುವುದಿಲ್ಲ. ಬೆಂಕಿ ಸುಡಬಾರದೆಂದು ಜನರೆಲ್ಲರೂ ಒಟ್ಟಾಗಿ ನಿರ್ಧರಿಸಿದರೂ ಅದು ಸುಡದೇ ಇರುವುದಿಲ್ಲ. ಆ ಬೆಂಕಿ ತನ್ನ ಹತ್ತಿರಕ್ಕೆ ಬರುವ ಯಾವುದೇ ವಸ್ತುವನ್ನು ಯಾವುದೇ ಭೇದ ಮಾಡದೇ ಸುಡುತ್ತದೆ.
     ಮಾನವನ ಬದುಕಿನಲ್ಲಿ ದೇವರ ಪಾತ್ರ ಹೇಗಿರುತ್ತದೆಂಬುದಕ್ಕೆ ಒಂದು ಸಣ್ಣ ಉದಾಹರಣೆ ಮೂಲಕ ವಿವರಿಸಲು ಪ್ರಯತ್ನಿಸಬಹುದು. ಚದುರಂಗದ ಆಟವನ್ನೇ ತೆಗೆದುಕೊಳ್ಳೋಣ. ಆ ಆಟಕ್ಕೆ ನಿಯಮವಿದೆ. ಆ ನಿಯಮಗಳ ಅನುಸಾರವಾಗಿ ಚದುರಂಗದ ಕಾಯಿಗಳನ್ನು ಆಟಗಾರ ನಡೆಸಬೇಕು. ಆ ನಿಯಮಗಳ ಅನುಸಾರವಾಗಿ ಆಟಗಾರ ತನ್ನ ಬುದ್ಧಿಮತ್ತೆಯನ್ನು ಉಪಯೋಗಿಸಿ ಕಾಯಿಗಳ ಚಲನೆ ಮಾಡಿದರೆ ಎದುರಾಳಿಯನ್ನು ಸೋಲಿಸಬಹುದು. ತಪ್ಪು ನಡೆಗಳನ್ನು ಮಾಡಿದರೆ ಸೋಲುತ್ತಾನೆ. ಈ ಆಟವನ್ನು ಗಮನಿಸಲು ಒಬ್ಬ ರೆಫರಿ ಇದ್ದು ಆತ ಪಂದ್ಯದ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಮಾತ್ರ ಗಮನಿಸುತ್ತಿರುತ್ತಾನೆ. ಕೊನೆಯಲ್ಲಿ ಫಲಿತಾಂಶ ನಿರ್ಧರಿಸುತ್ತಾನೆ. ಆತನ ಪಾತ್ರ ಅಷ್ಟಕ್ಕೇ ಸೀಮಿತ. ಆತ ಯಾವುದೇ ಆಟಗಾರನಿಗೆ ಹೀಗೆ ಆಡು, ಹಾಗೆ ಆಡು ಎಂದು ಹೇಳುವುದಿಲ್ಲ. ರೆಫರಿ/ಅಂಪೈರ್ ನನಗೆ ಸಹಾಯ ಮಾಡಲಿಲ್ಲ ಎಂದು ಯಾರಾದರೂ ದೂರುತ್ತಾರೆಯೇ? ಇಲ್ಲ. ದೇವರ ಕೆಲಸವೂ ಅಷ್ಟೇ. ಆತ ಕೇವಲ ಸಾಕ್ಷಿಯಾಗಿ ನಮ್ಮ ಚಟುವಟಿಕೆಗಳನ್ನು, ಕ್ರಿಯೆಗಳನ್ನು ನೋಡುತ್ತಿರುತ್ತಾನೆಯೇ ಹೊರತು, ಆತ ಸಹಾಯವನ್ನಾಗಲೀ, ಅಡ್ಡಿಯನ್ನಾಗಲೀ ಮಾಡುವುದಿಲ್ಲ. ಜೀವನವೆಂಬ ಆಟದಲ್ಲಿ ನಾವು ಪ್ರತಿಯೊಬ್ಬರೂ ಸ್ವತಂತ್ರ ಆಟಗಾರರೇ. ಮೊದಲೇ ಹೇಳಿದ್ದಂತೆ ಪ್ರತಿಯೊಂದೂ ನಿಯಮಾನುಸಾರವೇ ನಡೆಯುತ್ತದೆ. ಹೀಗೆ ಮಾಡಿದರೆ ಹೀಗೆ ಆಗುತ್ತದೆ ಎಂಬುದು ನಿರ್ಧರವಾಗಿರುತ್ತದೆ. ನಮ್ಮ ಬದುಕು ಎಚ್ಚರಿಕೆಯಿಂದ ಸಾಗಿದರೆ, ವಿವೇಚನಾಶಕ್ತಿ ಬಳಸಿ ನಡೆದರೆ ನಮಗೆ ಯಶಸ್ಸು ಸಿಕ್ಕೇಸಿಗುತ್ತದೆ. ಇಲ್ಲದಿದ್ದರೆ ಇಲ್ಲ, ಅಷ್ಟೆ. ಕೈ ಕೆಸರಾದರೆ ಬಾಯಿ ಮೊಸರು, ಕಷ್ಟಪಟ್ಟರೆ ಫಲವುಂಟು ಎಂಬುದು ಆಡುಮಾತಿನ ವೇದಮಂತ್ರಗಳು. ಇದು ಸರಿ, ಅದು ತಪ್ಪು ಎಂದು ಹೇಳುವವರು ಯಾರು? ಬೇರೆ ಯಾರೂ ಅಲ್ಲ, ನಾವೇ!
     ಈ ವೇದಮಂತ್ರ ಬದುಕಿನಲ್ಲಿ ನಮ್ಮ ಪಾತ್ರ ಮತ್ತು ದೇವರ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದೆ: ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈ ಸಮಮಮಾನ ಏತಿ| ಅನೂನಂ ಪಾತ್ರಮ್ ನಿಹಿತಂ ಏತತ್ಪಕ್ತಾರಂ ಪಕ್ವಃ ಪುನರಾವಿಷಾತಿ||(ಅಥರ್ವ.೧೨.೩.೪೮). ಯಾವುದೇ ಕಲ್ಮಶವಿಲ್ಲದ, ನ್ಯೂನತೆಯಿಲ್ಲದ ಪಾತ್ರೆ ನಮ್ಮಲ್ಲಿ ಅಂತರ್ನಿಹಿತವಾಗಿದೆ. ಈ ಪಾತ್ರೆಯಲ್ಲಿ ಬೇಯಿಸಲಾಗುವ ಪದಾರ್ಥ ಬೇಯಿಸಿದವನನ್ನು ತಪ್ಪದೆ ಸೇರಿಕೊಳ್ಳುತ್ತದೆ. ಯಾರಾದರೂ ಮಿತ್ರರು, ಹಿತೈಷಿಗಳು ಇದನ್ನು ತಪ್ಪಿಸುತ್ತಾರೆ ಎಂಬುದಕ್ಕೆ ಆಧಾರವಿಲ್ಲ ಎಂಬುದು ಈ ಮಂತ್ರದ ಅರ್ಥ. ದೇವರ ನ್ಯಾಯಪದ್ಧತಿಯಲ್ಲಿ ಅನ್ಯಾಯವಿಲ್ಲ, ಲೋಪವಿಲ್ಲ. ಅಂತರ್ನಿಹಿತವಾದ ಅಗೋಚರ ವ್ಯವಸ್ಥೆಯಲ್ಲಿ ನಾವು ಮಾಡುವ ಕರ್ಮಗಳು (ಅಂದರೆ ಬೇಯಿಸುವ ಅಡಿಗೆ) ಅದಕ್ಕೆ ತಕ್ಕ ಫಲಗಳನ್ನು ಕೊಡುತ್ತವೆ. ಅದನ್ನು ಮಾಡಿದವರೇ  ಅನುಭವಿಸಬೇಕೇ ಹೊರತು (ಮಾಡಿದ ಅಡಿಗೆಯನ್ನು ಬೇಯಿಸಿದವನೇ ತಿನ್ನಬೇಕು) ತಪ್ಪಿಸಿಕೊಳ್ಳಲು ಅನ್ಯ ಮಾರ್ಗಗಳಿಲ್ಲ. ಹಿತೈಷಿಗಳು, ಸ್ನೇಹಿತರು, ಗುರುಗಳು, ಬಂಧುಗಳು, ಮಧ್ಯವರ್ತಿಗಳು, ಪುರೋಹಿತರು, ಕೊನೆಯಲ್ಲಿ ದೇವರೂ ಸಹ ನಮ್ಮನ್ನು ನಮ್ಮ ಕರ್ಮಗಳ ಫಲವನ್ನು ಅನುಭವಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಬೆನ್ನಿಗಂಟಿದ ಕರ್ಮವನ್ನು ಅನುಭವಿಸಿ ಕಳೆದುಕೊಳ್ಳಲು ಮಾತ್ರ ಸಾಧ್ಯ. ಆದ್ದರಿಂದ ಜೀವನದ ಆಟವನ್ನು ಎಚ್ಚರಿಕೆಯಿಂದ ಆಡಿದರೆ ಮಾತ್ರ ನಾವು ಗೆಲ್ಲುತ್ತೇವೆ, ಇಲ್ಲದಿದ್ದರೆ ಸೋಲುತ್ತೇವೆ. ನಾವು ದೇವರ ಕೈಯಲ್ಲಿ ಆಡುವ ಗೊಂಬೆಗಳಲ್ಲ, ದೇವರ ಸಾಕ್ಷಿಯಾಗಿ ಆಟ ಆಡುವ ಆಟಗಾರರು! ಚೆನ್ನಾಗಿ ಆಡೋಣ!
-ಕ.ವೆಂ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ