ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜುಲೈ 8, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -9: ವಿಶ್ವಚೇತನ


     ಭಗವಂತ ಸರ್ವಶಕ್ತ, ಸರ್ವವ್ಯಾಪಕ, ನಿರಾಕಾರ. ಈ ಮಂತ್ರ ಹೀಗಿದೆ:
ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ| ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ|| (ಯಜು.೪೦.೫.) 
     ಅದು ವಿಶ್ವಕ್ಕೆ ಗತಿ ನೀಡುತ್ತದೆ. ಅದು ಸ್ವತಃ ಚಲಿಸುವುದಿಲ್ಲ. ಅದು ದೂರದಲ್ಲಿದೆ.  ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ. ಅದೇ ಇದೆಲ್ಲದರ ಹೊರಗೂ ಇದೆ.  ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂತಿರುವ, ಎಲ್ಲಾಕಡೆ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ನಿಜವಾಗಿ ಅದು ಇರುವುದು ಹಾಗೆಯೇ. ಋಗ್ವೇದದ ಈ ಮಂತ್ರ ಹೇಳುತ್ತದೆ:
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್| ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.೧೦.೮೧.೩.)
     ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಸರ್ವದ್ರಷ್ಟನಾದ ಮತ್ತು ಎಲ್ಲೆಡೆಯಲ್ಲಿಯೂ ಮುಖವನ್ನುಳ್ಳ, ಎಲ್ಲೆಡೆಯೂ ತಿರುಗುವ, ಎಲ್ಲೆಡೆಯಲ್ಲೂ ಬಾಹುಗಳನ್ನುಳ್ಳ, ಸರ್ವಕರ್ತೃವಾದ, ಅದೇ ರೀತಿ ಎಲ್ಲೆಡೆಯಲ್ಲೂ ಪಾದಗಳನ್ನುಳ್ಳ, ಸರ್ವಗತನಾದ, ಒಬ್ಬ ದೇವನು ದ್ಯುಲೋಕ, ಪೃಥಿವಿ ಲೋಕಗಳನ್ನು ರಚಿಸುತ್ತಾ ತನ್ನ ಸೃಜನ, ಪೋಷಣ ಸಾಮರ್ಥ್ಯಗಳಿಂದಲೂ ಗತಿಶೀಲ ಚೇತನರಾದ ಜೀವಾತ್ಮರುಗಳ ಮೂಲಕವೂ ಪ್ರಾಣವನ್ನು ಊದುತ್ತಿದ್ದಾನೆ ಎಂದು ಈ ಮಂತ್ರದ ಅರ್ಥ. ಕಣ್ಣು, ಮುಖ, ಬಾಹು, ಪಾದ ಮೊದಲಾದ ಶಬ್ದಗಳನ್ನು ಕಂಡು ಭಗವಂತ ಸಾಕಾರನೋ ಎಂಬ ಭ್ರಾಂತಿಗೆ ಬಲಿಬೀಳುವುದು ಬೇಡ. ಭಗವಂತ ಸರ್ವವ್ಯಾಪಕನಾದ ಕಾರಣ, ಸರ್ವಥಾ ನಿರಾಕಾರ. ಕಣ್ಣು, ಮುಖ, ಕೈಕಾಲು ಇಲ್ಲದಿದ್ದರೂ, ಭಗವಂತ ಅಂಗೋಪಾಂಗಗಳು ಮಾಡಬಹುದಾದ ಕೆಲಸವನ್ನೆಲ್ಲಾ ಅಶರೀರನಾಗಿಯೇ ಮಾಡುತ್ತಿದ್ದಾನೆ ಎನ್ನುವುದೇ ಈ ಮಂತ್ರದ ಭಾವನೆ. ಶಬ್ದಾರ್ಥವನ್ನೇ ಹಿಡಿದು ಹೊರಟರೆ ಎಲ್ಲೆಡೆಯೂ ಕಣ್ಣು, ಎಲ್ಲೆಡೆಯೂ ಮುಖ, ಎಲ್ಲೆಡೆಯೂ ಕೈ, ಎಲ್ಲೆಡೆಯೂ ಕಾಲು ಇರುವ ಎದೆ, ಬೆನ್ನು, ಹೊಟ್ಟೆ ಹಾಗೂ ಕಿವಿಯೇ ಇಲ್ಲದ, ಜಗತ್ತಿನ ಯಾವ ದೇವಸ್ಥಾನದಲ್ಲಿಯೂ, ಯಾವ ಕಲಾಮಂದಿರದಲಿಯೂ ಕಾಣಿಸದ ವಿಚಿತ್ರ ಮೂರ್ತಿಯೊಂದನ್ನು ಊಹಿಸಿಕೊಳ್ಳಬೇಕಾದೀತು. ಆದರೆ ವೇದಗಳ ಭಾಷಾಶೈಲಿಯನ್ನು ಬಲ್ಲ ಯಾರೂ ಮೋಸ ಹೋಗಲಾರರು. ಸರ್ವತ್ರ ವ್ಯಾಪಕನಾದ, ಸರ್ವಕರ್ತೃ, ಸರ್ವಪಾತ್ರವಾದ ಭಗವಂತನಿರುವುದು ಒಬ್ಬನೇ. ಈ ಮಂತ್ರದಲ್ಲಿಯೂ "ಏಕ ದೇವಃ" ಎಂಬುದನ್ನು ಗಮನಿಸಿ.
ಒಳ್ಳೆಯ ದಾರಿ
      ಪರಮಾತ್ಮ ಎಂದೂ ಸಾಕಾರ ರೂಪಿ ಅಲ್ಲವೇ ಅಲ್ಲ, ಸಾಕಾರನೆಂದಾಕ್ಷಣ ಸರ್ವಶಕ್ತ, ಸರ್ವವ್ಯಾಪಕ ಭಗವಂತನನ್ನು ಮಿತಿಗೊಳಿಸಿದಂತೆ! ಆತ ಅನುಭವಗಮ್ಯನೇ ಹೊರತು ಕಣ್ಣಿನಿಂದ ಕಾಣಲಾಗುವುದಿಲ್ಲ. ಹೃದಯದಲ್ಲಿ ಕಾಣಬೇಕು, ಅನುಭವಿಸಬೇಕು! ಸ್ವರ್ಗ, ನರಕ ಅನ್ನುವುದು ಬೇರೆ ಇಲ್ಲ. ಇಲ್ಲೇ ಇದೆ. ಸ್ವರ್ಗ ಅಂದರೆ ಮೇಲೇರುವುದು, ನರಕ ಅಂದರೆ ಕೆಳಕ್ಕೆ ಇಳಿಯುವುದು. ನಮ್ಮ ನಡವಳಿಕೆಗಳು ಸರಿಯಿದ್ದರೆ, ಸತ್ಕರ್ಮ ಮಾಡಿದರೆ ನಾವು ಸ್ವರ್ಗ ಕಾಣುತ್ತೇವೆ, ಇಲ್ಲದಿದ್ದರೆ ಕೆಳಗೆ ಬೀಳುತ್ತೇವೆ. ನನ್ನನ್ನು ನಾಸ್ತಿಕನೆಂದು ದೂರುವವರೂ ಇದ್ದಾರೆ. ಆಸ್ತಿಕರೆಂದರೆ ಯಾರು? ನಾಸ್ತಿಕರು ಯಾರು? ಅರ್ಥರಹಿತ ಸಂಪ್ರದಾಯಗಳು, ಆಚರಣೆಗಳನ್ನು ಪೋಷಿಸುವ ಆಸ್ತಿಕರೆನಿಸಿಕೊಳ್ಳುವವರಿಗಿಂತ ನಾಸ್ತಿಕರೇ ಮೇಲು! ಜ್ಞಾನಿಗಳಾದವರು ವಿಚಾರ ತಿಳಿದವರಾಗಿದ್ದು ಯಾರು ಏನೇ ಹೇಳಿದರೂ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ. ಆದರೆ ತಿಳುವಳಿಕೆ ಕಡಿಮೆಯಿದ್ದವರನ್ನು ದಾರಿ ತಪ್ಪಿಸುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಕ್ಷಮಿಸಬೇಕು, ನಾನು ಆಡಿದ ಮಾತುಗಳು ಕಟುವಾಗಿ ಕಾಣಬಹುದು, ಆದರೆ ಸತ್ಯ ಸತ್ಯವೇ. ನಾನು ಯಾರನ್ನೂ ನೋಯಿಸಲು ಉದ್ದೇಶಿಸಿಲ್ಲ, ಕೆಟ್ಟ ಭಾವನೆಯಿಂದ ಮಾತನಾಡಿಲ್ಲ, ಪಂಡಿತನೆಂದು ಭಾವಿಸಿ ಆಡಿಲ್ಲ. ಒಳ್ಳೆಯ ವಿಚಾರ ಮಾಡೋಣ, ವಿಮರ್ಶೆ ಮಾಡೋಣ, ಒಳ್ಳೆಯ ದಾರಿಯಲ್ಲಿ ನಡೆಯೋಣ.
ಬ್ರಹ್ಮಾಂಡದ ಸೃಷ್ಟಿ
     ದಿಕ್ಕುಗಳು ಎನ್ನುವುದು ಸ್ಥಳ ಗುರುತಿಸುವುದು, ದಿಸೆ ತೋರಿಸುವ ಸಲುವಾಗಿ ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದೇ ಹೊರತು ಮತ್ತೇನಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಒಂದು ಅರ್ಥದಲ್ಲಿ ಸರಿಯಿರಬಹುದು. ಆ ಸೂರ್ಯನೂ ಸಹ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. ಬಳಕೆಯಲ್ಲಿ ನಾವು ಪೂರ್ವ, ಪಶ್ಚಿಮ, ಇತ್ಯಾದಿ ಎಂಟು ದಿಕ್ಕುಗಳನ್ನು ಬಳಸುತ್ತೇವೆ. ನಮಗೆ ಪೂರ್ವವೆನಿಸುವ ಒಂದು ಸ್ಥಳ ಇನ್ನೊಬ್ಬರಿಗೆ ಪಶ್ಚಿಮವಾಗಬಹುದು. ವಾಸ್ತವವಾಗಿ ನಮ್ಮ ಸುತ್ತಲೂ ಇರುವ 360 ಡಿಗ್ರಿ ಪ್ರದೇಶದ ಒಂದೊಂದು ಡಿಗ್ರಿಯೂ ಒಂದೊಂದು ದಿಕ್ಕು. ಈಗ ಹೇಳಲಾಗುತ್ತಿರುವ ಜ್ಯೋತಿಷ್ಯ ಎಂಬುದಕ್ಕೆ ಅರ್ಥವಿಲ್ಲ. ಬ್ರಹ್ಮಾಂಡದ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಜನರನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಅವುಗಳೇ ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯಿ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಅವನೇ ಭಗವಂತ. ಈ ವಿಶಾಲ ಬ್ರಹ್ಮಾಂಡವನ್ನು ಆ ಪರಮಾತ್ಮ ಇದ್ದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾನೆ. ಇದನ್ನು ಅರಿಯದಿದ್ದರೆ ಅವನಿಗೆ ನಷ್ಟವೇನೂ ಇಲ್ಲ. ನಾನು ಎಷ್ಟೋ ವಿದ್ವಾಂಸರನ್ನು 'ನಕ್ಷತ್ರಗಳು ಎಷ್ಟಿವೆ ಎಂಬುದು ಗೊತ್ತೇ?' ಎಂದು ಪ್ರಶ್ನಿಸಿದ್ದೇನೆ. ಯಾರಿಗೂ ಉತ್ತರಿಸಲು ಆಗಿಲ್ಲ. ಸರ್ ಸಿ.ವಿ. ರಾಮನ್‌ರವರನ್ನೂ ಕೇಳಿದ್ದೆ. ಅವರು "ನಾನು ಸಣ್ಣವನು, ಇಷ್ಟು ದೊಡ್ಡ ಬ್ರಹ್ಮಾಂಡವನ್ನು ಅರಿಯುವ, ಅಳೆಯುವ ಶಕ್ತಿ ನನ್ನಂತಹವರಿಗೆ ಎಲ್ಲಿ ಬರಬೇಕು" ಎಂದು ಹೇಳಿದ್ದರು.
ಬ್ರಹ್ಮಚರ್ಯ
     ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವವರು ಎಂದು ಅರ್ಥವಲ್ಲ. ಬ್ರಹ್ಮನಲ್ಲಿ ಸಂಚಾರ ಮಾಡುವ ಶಕ್ತಿಯಿರುವವನು ಎಂದು ಅರ್ಥ. ಈ ಮನುಷ್ಯ ಜನ್ಮ ದೊಡ್ಡದು. ಅದನ್ನು ಭೌತಿಕ ಸುಖಭೋಗಕ್ಕಾಗಿ ಮಾತ್ರ ಎಳಸದೆ ಈ ಜನ್ಮದ ಅರ್ಥ ತಿಳಿದು ಸತ್ಕರ್ಮಕ್ಕಾಗಿ ಬಳಸಬೇಕು. ಮನುಷ್ಯಜನ್ಮ ಎಷ್ಟೋ ಜನ್ಮಗಳನ್ನು ದಾಟಿಬಂದ ನಂತರ ಸಿಕ್ಕಿದೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಗಳಾಗಬೇಕಾದುದು ಮನುಷ್ಯಜನ್ಮದ ಉದ್ದೇಶ. ಯಾರೋ ಹೇಳುತ್ತಿದ್ದರು, ಲಕ್ಷಾಂತರ ಜನ್ಮಗಳ ನಂತರ ಮನುಷ್ಯನಾಗಿ ಹುಟ್ಟಿದ್ದೇವೆ, ಪುನಃ ಕೆಳಗೆ ಹೋಗುತ್ತೇವೆಯೇ? ಮೇಲೆ ಹತ್ತಿ ಬಂದಿದ್ದೇವೆ, ಕೆಳಗೆ ಇಳಿಯುತ್ತೇವೆಯೇ? ಸರಿಯಾಗಿ ಮನುಷ್ಯನಂತೆ ನಡೆಯದಿದ್ದರೆ ಮನುಷ್ಯರಾಗೇ ಹುಟ್ಟುತ್ತೇವೆಂದು ಹೇಳಲಾಗುವುದಿಲ್ಲ. ನಾವು ಮಾಡಿದ ಕರ್ಮವನ್ನು ನಾವು ಭೋಗಿಸಲೇಬೇಕು. ಇದು ಭಗವಂತನ ನಿಯಮ. ನಾನು ಬಹಳಷ್ಟು ಸನ್ಯಾಸಿಗಳನ್ನು ನೋಡಿದ್ದೇನೆ - ಕಾವಿ ಬಟ್ಟೆ ಸನ್ಯಾಸಿಗಳು, ಬಿಳಿ ಬಟ್ಟೆ ಸನ್ಯಾಸಿಗಳು, ಹಳದಿ ಬಟ್ಟೆ ಸನ್ಯಾಸಿಗಳು, ಕಪ್ಪು ಬಟ್ಟೆ ಸನ್ಯಾಸಿಗಳು, ಹೀಗೆ. ಸನ್ಯಾಸಿಗಳು ಎಂದರೆ ಎಲ್ಲವನ್ನೂ ಬಿಟ್ಟವರು, ಅವರೇನು ಬಿಟ್ಟಿದ್ದಾರೆ?  ಹಸಿವಾದಾಗ 'ಭವತಿ ಭಿಕ್ಷಾಂದೇಹಿ' ಅನ್ನುತ್ತಾರೆ, ಛಳಿಯಾದಾಗ ಬೆಚ್ಚಗೆ ಹೊದ್ದುಕೊಳ್ಳುತ್ತಾರೆ! ಸನ್ಯಾಸಿಗಳೆಂದರೆ ಭೌತಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಪರಮಾತ್ಮನ ಕುರಿತು ಧ್ಯಾನದಲ್ಲಿ ತೊಡಗಿಕೊಂಡವರು ಎನ್ನುತ್ತಾರೆ. ಅಂತಹ ನಿಜವಾದ ಸನ್ಯಾಸಿಗಳು ಎಷ್ಟು ಜನ ಇದ್ದಾರೆ?
     ಸಾಮಾನ್ಯತಃ ಮಾನವನ ಆಯಸ್ಸು ನೂರು ವರ್ಷಗಳ ಪರಿಮಿತಿಯುಳ್ಳದ್ದು. ಶತಂ ಜೀವ ಶರದೋ ವರ್ಧಮಾನಃ || (ಋಕ್.10.161.4.) - ಅಭಿವೃದ್ಧಿ ಹೊಂದುತ್ತಾ ನೂರು ವರ್ಷಗಳ ಕಾಲ ಜೀವಿಸು - ಎಂಬುದು ವೇದದ ಆದೇಶ. ಸಾಫಲ್ಯವನ್ನು ಗಳಿಸುವ ಸಲುವಾಗಿ, ವೇದಗಳು ಈ ನೂರು ವರ್ಷಗಳನ್ನು ನಾಲ್ಕು ಸಮಭಾಗಗಳಾಗಿ ಭಾವಿಸಿ, ಒಂದೊಂದು ಭಾಗಕ್ಕೂ "ಆಶ್ರಮ" ಎಂಬ ಹೆಸರನ್ನು ಕೊಡುತ್ತವೆ. ಎಲ್ಲ ಬಗೆಯ ಶಕ್ತಿಗಳನ್ನೂ ವರ್ಧಿಸಿಕೊಳ್ಳುವ ಸಲುವಾಗಿ ಬ್ರಹ್ಮಚರ್ಯ, ವರ್ಧಿತ ಶಕ್ತಿಗಳನ್ನು ತನ್ನ ಮತ್ತು ಸಮಾಜದ ಹಿತಕ್ಕೆ ಉಪಯೋಗಿಸುವ ಸಲುವಾಗಿ ಗಾರ್ಹಸ್ಥ್ಯ, ಆಧ್ಯಾತ್ಮಿಕ ಸಾಧನೆಯೊಂದಿಗೆ, ರಾಷ್ಟ್ರದ ಮಕ್ಕಳಿಗೆ ಶಿಕ್ಷಣದಾನಕ್ಕಾಗಿ ವಾನಪ್ರಸ್ಥ ಹಾಗೂ ಸಾಂಸಾರಿಕ ಮೋಹದ ಪೂರ್ಣತ್ಯಾಗ ಮಾಡಿ, ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಜಗದುಪಕಾರಾರ್ಥವಾಗಿ ಸದ್ಧರ್ಮ ಪ್ರಚಾರ ಮಾಡುವುದಕ್ಕಾಗಿ ಸಂನ್ಯಾಸ, ಹೀಗೆ ವೈದಿಕ ಧರ್ಮ ನಾಲ್ಕು ಆಶ್ರಮಗಳನ್ನು ವಿಧಿಸುತ್ತದೆ.
     ಜನ್ಮದಿಂದಾರಂಭಿಸಿ, 25 ವರ್ಷ ಪೂರ್ತಿಯಾಗುವವರೆಗೆ, ಮಾನವನು ಬ್ರಹ್ಮಚರ್ಯಾಶ್ರಮವನ್ನು ಪಾಲಿಸಬೇಕು. ಬ್ರಹ್ಮಚರ್ಯ ಎಂಬ ಶಬ್ದದ ಆರ್ಥ, ಪರಮಾತ್ಮನಲ್ಲಿ ಮತ್ತು ವೇದಗಳಲ್ಲಿ ವಿಹಾರ, ವಿಹರಿಸುವುದು ಎಂದಾಗುತ್ತದೆ. ಈ ಮಹೋಚ್ಚವಾದ ಗುರಿಯನ್ನು ಮುಟ್ಟಬೇಕಾದರೆ, ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯು ಪೂರ್ಣತಃ ಜಿತೇಂದ್ರಿಯರಾಗಬೇಕಾದುದು ಅನಿವಾರ್ಯ. ಇದೇ ಕಾರಣದಿಂದ, ಬ್ರಹ್ಮಚರ್ಯ ಎಂಬ ಶಬ್ದಕ್ಕೆ ಸಾಧಾರಣತಃ ಇಂದ್ರಿಯ ನಿಗ್ರಹ ಎಂಬರ್ಥ ಕೊಡಲ್ಪಡುತ್ತದೆ.
     ಬಾಲಕ ಮತ್ತು ಬಾಲಿಕೆಯು ಎಂಟು ವರ್ಷ ಪ್ರಾಯದವರಾದಾಗ, ಅವರ ಉಪನಯನ ಸಂಸ್ಕಾರವಾಗಿ, ವೇದಾರಂಭವೂ ನಡೆದು ಅವರು ಗುರುಕುಲವನ್ನು ಸೇರುತ್ತಾರೆ. ಪ್ರಾಪಂಚಿಕ ಹವ್ಯಾಸಗಳಿಂದ ಮತ್ತು ಪ್ರಲೋಭನಕಾರೀ ವಾತಾವರಣದಿಂದ ದೂರವಿದ್ದು, ಆಧ್ಯಾತ್ಮಿಕವಾದ ಸಾತ್ವಿಕ ವಾಯುಮಂಡಲದಲ್ಲಿ ಸ್ವತಃ ಶ್ರಮಸಹಿಷ್ಣುಗಳಾಗಿ, ತಮ್ಮ ಬೌದ್ಧಿಕ ಹಾಗೂ ಮಾನಸಿಕ ಶಕ್ತಿಗಳನ್ನು ಏಕೀಕರಿಸಿ, ವೇದವಿದ್ಯೆ ಹಾಗೂ ಲೌಕಿಕವಿದ್ಯೆಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಸರಳ ಜೀವನ, ಉದಾತ್ತ ವಿಚಾರ - ಎಂಬ ಕಥನಕ್ಕೆ ತಥ್ಯದ ರೂಪ ನೀಡುತ್ತಾರೆ. ಸದಾಚಾರಿಗಳೂ, ಬ್ರಹ್ಮನಿಷ್ಠರೂ, ಶ್ರೋತ್ರೀಯರೂ ಆದ ಆಚಾರ್ಯರ ಅಧೀನದಲ್ಲಿದ್ದು ಸ್ವತಃ ಸಚ್ಚರಿತ್ರರೂ, ಶರೀರಾತ್ಮ-ಬುದ್ಧಿ-ಮನೋಬಲಯುಕ್ತರೂ, ಗಂಭೀರ ವಿದ್ವಾಂಸರೂ, ಆಜೀವಿಕಾ ಸಂಪಾದನ ಸಮರ್ಥರೂ ಆಗುತ್ತಾರೆ. ಸಂಯಮಿಗಳಾಗಿ ಸರ್ವವಿಧ ಶಕ್ತಿಗಳ ಸಂಚಯವನ್ನೂ ಮಾಡಿಕೊಳ್ಳುತ್ತಾರೆ. ಅಥರ್ವವೇದದ ಮಾತುಗಳಲ್ಲಿ ಅವರ ಸ್ವರೂಪ ಹೀಗಿರುತ್ತದೆ:
ಬ್ರಹ್ಮಚಾರೀ ಬ್ರಹ್ಮ ಭ್ರಾಜದ್ಭಿಭರ್ತಿ ತಸ್ಮಿನ್ದೇವಾ ಅಧಿ ವಿಶ್ವೇ ಸಮೋತಾಃ |
ಪ್ರಾಣಾಪಾನೌ ಜನಯನ್ನಾದ್ವ್ಯಾನಂ ವಾಚಂ ಮನೋ ಹೃದಯಂ ಬ್ರಹ್ಮ ಮೇಧಾಮ್ || (ಅಥರ್ವ.11.5.24.)
     ಬ್ರಹ್ಮಚಾರಿಯು ಪ್ರಾಣ, ಅಪಾನ ಮತ್ತು ವ್ಯಾನ, ಈ ಮೂರು ಪ್ರಾಣ ಶಕ್ತಿಗಳನ್ನೂ, ವಾಣಿಯನ್ನೂ, ಮನಸ್ಸನ್ನೂ, ಹೃದಯವನ್ನೂ, ವೇದಜ್ಞಾನವನ್ನೂ, ಬುದ್ಧಿಯನ್ನೂ, ಸರ್ವರೀತಿಯಲ್ಲಿಯೂ ವರ್ಧಿಸಿಕೊಳ್ಳುತ್ತಾ, ಪ್ರಕಾಶಮಾನವಾದ ಬ್ರಹ್ಮತತ್ವವನ್ನು ಧರಿಸುತ್ತಾನೆ. ಅವನಲ್ಲಿ ಸಮಸ್ತ ಇಂದ್ರಿಯ ಶಕ್ತಿಗಳೂ, ದಿವ್ಯ ಗುಣಗಳೂ, ಹಾಸು ಹೊಕ್ಕಾಗಿ ಹೆಣೆದು ಬರುತ್ತವೆ ಎಂದು ಇದು ಸಾರುತ್ತದೆ. ನಿಜವಾಗಿ ಬ್ರಹ್ಮಚಾರಿ-ಬ್ರಹ್ಮಚಾರಿಣಿಯರು ಬಲಿಷ್ಠವಾದ ಮನಸ್ಸು, ಪರಿಪುಷ್ಟವಾದ ವಾಣಿ, ಧೃಢವಾದ ಶರೀರ, ವಿಶಾಲವಾದ ಹೃದಯ, ಪೂರ್ಣ ವಿಕಸಿತವಾದ ಬುದ್ಧಿ, ಅದ್ಭುತ ವೇದಜ್ಞಾನ, ಪ್ರಾಣಶಕ್ತಿ - ಎಲ್ಲವನ್ನೂ ಪಡೆದುಕೊಂಡು, ಮೈವೆತ್ತ ದಿವ್ಯಶಕ್ತಿಗಳಂತೆ ವಿರಾಜಿಸುತ್ತಾರೆ. ಸತತವೂ ಸಾಧಿಸಿಕೊಂಡು ಬಂದ ಸಂಯಮದ ಮಧುರ ಮಹಿಮೆಯ ಪರಿಣಾಮದಿಂದ ಆದರ್ಶ ಮಾನವರಾಗಿ ಗುರುಕುಲದಿಂದ ಮರಳಿ ಪಿತೃಗೃಹಕ್ಕೆ ಪ್ರವೇಶಿಸುತ್ತಾರೆ. ಸಚ್ಚರಿತ್ರೆಯ ಸ್ಫುಟ ಸತ್ಯದ ಪ್ರಭಾವದಿಂದ ಸರ್ವರ ಸ್ತುತಿಗೂ ಪಾತ್ರರಾಗುತ್ತಾರೆ. ನಿಜವಾದ ಬ್ರಹ್ಮಚರ್ಯದ ಬಣ್ಣಿಸಲಾಗದ ಬಲ್ಮೆಯಿದು.
     ಕನ್ಯೆಯರ ಕಾಯ, ಪ್ರಕೃತಿ ನಿಯಮಾನುಸಾರ ಪುರುಷ ಶರೀರಕ್ಕಿಂತ ಬೇಗನೇ ಯೌವನದಲ್ಲಿ ಪ್ರವೇಶ ಮಾಡುವ ಕಾರಣ, ಅವರ ಬ್ರಹ್ಮಚರ್ಯದ ಕನಿಷ್ಠ ಮಿತಿ 16 ವರ್ಷಗಳದ್ದಾಗಿದೆ. ಆದರೆ, ಕನ್ಯೆಯರೇ ಆಗಲಿ, ಬ್ರಹ್ಮಚರ್ಯದ ಕನಿಷ್ಠ ಮಿತಿ ತೀರಿದೊಡನೆ, ವಿವಾಹಿತರಾಗಲೇಬೇಕೆಂಬ ಬಲವದ್ಬಂಧನವೇನೂ ಇಲ್ಲ. ಆ ಮನೋಭಾವ, ಮನೋನಿಗ್ರಹ ಸಾಮರ್ಥ್ಯ, ಯಾವುದಾದರೊಂದು ಉನ್ನತ ಧ್ಯೇಯಕ್ಕಾಗಿ ಜೀವನವನ್ನು ಮೀಸಲಿಡುವ ಧೃಢವಾದ ಭಾವನೆಯಿದ್ದಲ್ಲಿ, ತಮಗೆ ಸೂಕ್ತವೆಂದು ತೋರುವಷ್ಟು ಕಾಲ ಅಥವಾ ಜೀವನ ಪೂರ್ತ ಬ್ರಹ್ಮಚರ್ಯಾಶ್ರಮದಲ್ಲೇ ಇರಬಹುದು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವ ವಿಷಯವಲ್ಲ.
-ಕ.ವೆಂ.ನಾಗರಾಜ್.
*****************
ದಿನಾಂಕ 17.06.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ