ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 10, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -10: ಯಾರು ಕಳ್ಳರು?


     ಪಂಡಿತ ಸುಧಾಕರ ಚತುರ್‍ವೇದಿಯವರು ಪ್ರತಿನಿತ್ಯ ಬೆಳಿಗ್ಗೆ 3.00-3.30ರ ಸಮಯಕ್ಕೆ ಎದ್ದುಬಿಡುತ್ತಾರೆ ಮತ್ತು ಸಂಜೆ 7.00ರ ಸಮಯಕ್ಕೆ ಮಲಗುತ್ತಾರೆ. ಪ್ರತಿನಿತ್ಯ ಚಟುವಟಿಕೆಯಲ್ಲಿ ತೊಡಗಿರುವ ಇವರು ವೇದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಆಸಕ್ತರಿಗೆ ಅವರ ಸಂದೇಹಗಳನ್ನು ಪರಿಹರಿಸುವುದು ಮುಂತಾದುವುಗಳಲ್ಲಿ ತೊಡಗಿಕೊಳ್ಳುತ್ತಾರೆ. ಇತ್ತೀಚೆಗಷ್ಟೆ ಇವರ ಪ್ರಧಾನ ಸಂಪಾದಕತ್ವದಲ್ಲಿ ಮಹರ್ಷಿ ದಯಾನಂದ ಸರಸ್ವತಿ ವಿರಚಿತ ವೇದಭಾಷ್ಯದ ಕನ್ನಡ ಅವತರಣಿಕೆಯ 20ನೆಯ ಸಂಪುಟ ಬಿಡುಗಡೆಯಾಗಿ ವೇದಲೋಕಕ್ಕೆ ಅಮೂಲ್ಯ ಸಂಪತ್ತು ದೊರಕಿದಂತಾಗಿದೆ. ಮಹಾತ್ಮ ಗಾಂಧಿಯವರ ಒಡನಾಡಿಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಇವರು 31ಕ್ಕೂ ಹೆಚ್ಚು ಸಲ ಬಂಧಿಸಲ್ಪಟ್ಟು, ಸುಮಾರು 13 ವರ್ಷಗಳಿಗೂ ಹೆಚ್ಚು ಕಾಲ ಭಾರತದ ವಿವಿಧ ಕಾರಾಗೃಹಗಳಲ್ಲಿ ಕಳೆದಿದ್ದಾರೆ. ಈಗ ಅಪರಾಧಗಳು ಮತ್ತು  ಭ್ರಷ್ಠಾಚಾರ ಮಿತಿ ಮೀರಿ ಹೆಚ್ಚಾಗಿರುವ ಬಗ್ಗೆ ಖೇದ ವ್ಯಕ್ತಪಡಿಸುವ ಅವರು, "ಇದಕ್ಕಾಗಿಯೇ ನಾವು ಹೋರಾಡಿದೆವಾ?" ಎಂದು ಉದ್ಗರಿಸುತ್ತಾರೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಬೇಕೆಂದು, ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಶಸ್ತಿ ದೊರಕುವುದೆಂಬ ಕೆಲವರ ಸಲಹೆಯನ್ನು ಮೊಳಕೆಯಲ್ಲೇ ಚಿವುಟಿದ್ದ ಅವರು, "ಮಾಡುವ ತ್ಯಾಗವೇ ದೊಡ್ಡ ಬಹುಮಾನ" ಎಂದಿದ್ದರು! ಇವರ ವಿಚಾರಧಾರೆಯ 10ನೆಯ ಕಂತು ಇಲ್ಲಿದೆ.
***********
     ಒಂದು ವಾಕ್ಯವಿದೆ: "ಕಳ್ಳತನಕ್ಕೆ ಸಮನಾದ ಪಾಪ ಯಾವುದೂ ಇಲ್ಲ". ಅಹಿಂಸೆ, ಸತ್ಯ, ಅಪರಿಗ್ರಹ, ಬ್ರಹ್ಮಚರ್ಯ ಈ ಎಲ್ಲದರ ಬುಡವನ್ನೂ ಸ್ತೇಯ (ಕಳ್ಳತನ)  ಕತ್ತರಿಸುತ್ತದೆ. ಈ ಕಳ್ಳತನದ ಭಾವನೆ - 'ಯಾರದ್ದೋ .ಐಶ್ವರ್ಯ, ಮನಸ್ಸಿನಲ್ಲಿ ಕದ್ದುಬಿಟ್ಟೆ, ಯಾರಿಗೆ ಗೊತ್ತಾಗುತ್ತೆ? ದೇವರಿಗೆ ಗೊತ್ತಾಗುತ್ತೆ, ಪರವಾಗಿಲ್ಲ, ಅವನೇನು ಹೇಳ್ತಾನಾ? ಆಗಲಿ, ಆ ಸ್ತೇಯದಿಂದ ನನಗೆ ಲಾಭ ಆಗೋದಿದ್ದರೆ ಆಗಲಿ' - ಈ ತರಹದ ಸ್ತೇಯ ಭಾವನೆ ಇದೆಯಲ್ಲಾ ಇದು ಸರಿಯಲ್ಲ. ಒಂದು ವೇದ ಮಂತ್ರದ ಅರ್ಥ ಹೀಗಿದೆ: "ನಾನು ಕಳ್ಳನಾಗಿದ್ದ ಪಕ್ಷದಲ್ಲಿ ಇವತ್ತೇ ನನಗೆ ಸಾವು ಬರಲಿ, ಕಳ್ಳತನದಿಂದ ಕದ್ದು ಬೇರೆಯವರ ಸಂಪತ್ತನ್ನು ಅನುಭವಿಸುವುದಕ್ಕಿಂತ ಬದಲು ಸಾಯುವುದೇ ಮೇಲು. ಉಪವಾಸ ಮಾಡುವುದೇ ಮೇಲು". ಈ ಭಾವನೆಯನ್ನೆಲ್ಲಾ ಯಾರೂ ಅರ್ಥ ಮಾಡಿಕೊಳ್ಳುವುದಕ್ಕೆ ಹೋಗುವುದಿಲ್ಲ.
     ಒಬ್ಬರು ದೊಡ್ಡ ಪಂಡಿತರು ಇದ್ದರು. ಅವರು ನನ್ನ ಹಾಗೇನೇ, ಎಲ್ಲಾ ವೇದಗಳನ್ನೂ ಬಾಯಿಪಾಠ ಮಾಡಿಕೊಂಡಿದ್ದರು. ಅವರಿಗೆ ಈ ಮೇಲೆ ಹೇಳಿದ ಮಂತ್ರ ಕೊಟ್ಟು, 'ಸ್ವಾಮಿ, ಸ್ವಲ್ಪ ಅರ್ಥ ಹೇಳ್ತೀರಾ?' ಅಂದೆ. 'ಅರ್ಥ ಅದರೊಳಗೇ ಇದೆಯಲ್ಲಾ ಸ್ವಾಮಿ' ಅಂದರು. 'ಅರ್ಥ ಇದೆ, ಅದರೊಳಗೇ ಇದೆ. ನಿಮ್ಮಂತಹವರಿಗೆ ಗೊತ್ತಾಗುತ್ತೆ, ನನ್ನಂತಹ ಪೆದ್ದರಿಗೆ ಗೊತ್ತಾಗಲ್ಲ, ಸ್ವಲ್ಪ ಬಿಡಿಸಿ ಹೇಳಿ' ಅಂದರೆ ಅವರು 'ಅಯ್ಯೋ ಪಂಡಿತಜಿ, ಮುಚ್ಚುಮರೆ ಏನು, ನಾನು ಗಿಣಿಪಾಠ ಮಾಡಿದೋನು, ಅರ್ಥ ಹೇಳೋಕೆ ಕಷ್ಟ' ಅಂದರು. ಗಿಣಿ ಏನು ಹೇಳಿಕೊಡ್ತಾರೋ ಅದನ್ನು ಹೇಳುತ್ತೆ, ರಾಮ ಅಂದರೆ ರಾಮ ಅನ್ನುತ್ತೆ, ಕೃಷ್ಣ ಅಂದರೆ ಕೃಷ್ಣ ಅನ್ನುತ್ತೆ. ಅದಕ್ಕೆ ರಾಮನೂ ಗೊತ್ತಿಲ್ಲ, ಕೃಷ್ಣನೂ ಗೊತ್ತಿಲ್ಲ. ಅದರ ತಲೆಯೊಳಗೆ ಏನೂ ಇಲ್ಲ. ಅಂತಹ ಗಿಣಿಪಾಠದಿಂದ ಪ್ರಯೋಜನ ಇಲ್ಲ. ಅವರು ಒಪ್ಪಿಕೊಂಡುಬಿಟ್ಟರು. ಅವರು ಮಾಡಿರೋದು ಗಿಣಿಪಾಠ ಅಷ್ಟೆ, ಅಂತ. ಅವರೂ ನಾಲ್ಕು ಹುಡುಗರಿಗೆ ಪಾಠ ಹೇಳಿಕೊಟ್ಟಿದ್ದಾರೆ. ಪಾಠ ಮಾಡಿದ ಗುರುಗಳಿಗೆ ಶಿಷ್ಯರು ಅರ್ಥ ಕೇಳಿದರೆ 'ಅದರಲ್ಲೆ ಇದೆಯಲ್ಲಾ' ಅಂತ ಹೇಳುವುದು ಬಹಳ ಸುಲಭ ಅಲ್ವಾ, ಹಾಗೆ ಹೇಳೋರು.
ಜ್ಞಾನವನ್ನು ಮುಚ್ಚಿಡುವುದೂ ಸ್ತೇಯ
     ಜ್ಞಾನವನ್ನು ಮುಚ್ಚಿಡುವುದೂ ಸಹ ಸ್ತೇಯವೇ. ನಮ್ಮ ಆಯುರ್ವೇದ ಶಾಸ್ತ್ರವನ್ನು ನೋಡಿದರೆ, ಆ ಶ್ಲೋಕಗಳನ್ನು ಓದಿದರೆ ವಾಗ್ಭಟ, ಗರ್ಗ, ಭಾನುಪ್ರಕಾಶ, ಚರಕ, ಸುಶ್ರುತ, . .ದೊಡ್ಡ ದೊಡ್ಡ ಜ್ಞಾನಿಗಳೇ ಇದ್ದರು. ಆದರೂ ಯಾಕೆ ಆಯುರ್ವೇದ ಹಾಳಾಗಿ ಹೋಯ್ತು? ಇದೇ ಬಂದದ್ದು ರೋಗ -  'ಸರಿಯಾದ ಶಿಷ್ಯ ಸಿಗಲಿಲ್ಲ. ಸರಿಯಾದ ಶಿಷ್ಯ ಸಿಕ್ಕರೆ ಅವನಿಗೆ ಮಾತ್ರಾ ಹೇಳ್ತೀನಿ' ಅನ್ನುವ ಮನೋಭಾವ. ಸರಿಯಾದ ಶಿಷ್ಯ ಸಿಗಲಿಲ್ಲ, ಅವರು ಹೇಳಿಕೊಡಲಿಲ್ಲ, ಎಷ್ಟೋ ವಿದ್ಯೆ ನಾಶವಾಗಿ ಹೋಯಿತು. ಒಂದು ವಿದ್ಯೆ ಇತ್ತು, ಅಲ್ಯುಮಿನಿಯಮ್ ಅನ್ನು ಚಿನ್ನ ಮಾಡೋದು, (ರಸವಿದ್ಯೆ). ಆಶ್ಚರ್ಯವಾಗುತ್ತೆ, ಇದು ಸಾಧ್ಯವೇ? ಚಿನ್ನ ಎಲ್ಲಿ, ಅಲ್ಯುಮಿನಿಯಮ್ ಎಲ್ಲಿ? ಅದೂ ಭೂಮಿಯ ತಳದಿಂದಲೇ ಬರುವುದು, ಇದೂ ಭೂಮಿ ತಳದಿಂದಲೇ ಬರುವುದು. ಈ ವಿದ್ಯೆ ಈಗೆಲ್ಲಿ?
     ಇದೆಲ್ಲಾ ಏಕೆ ಹೇಳ್ತಾ ಇದೀನಿ ಅಂದರೆ, ಸುಳ್ಳು ಹೇಳಬಾರದು ಎಂಬುದಕ್ಕೆ ಒತ್ತು ಕೊಡುವುದಕ್ಕೆ. ಒಂದು ಮಂತ್ರ 'ಪ್ರತಿ ನಿಂದಕನನ್ನು ಉದ್ಧಾರ ಮಾಡು' ಎಂದು ಉಪದೇಶಿಸುತ್ತದೆ, ನಾಶ ಮಾಡು ಅಂತ ಅಲ್ಲ, ಅವನು ನನ್ನನ್ನು ಬೈದ, ಆದ್ದರಿಂದ ಅವನನ್ನು ನಾಶ ಮಾಡು, ಎನ್ನುವುದಲ್ಲ.  ಭಗವಂತನ ಮಹಿಮೆ ನಮಗೆ ಗೊತ್ತಾಗಬೇಕಾದರೆ, ಅವನು ಪಾಪಿಗಳನ್ನು ಕೂಡಾ ಉದ್ಧಾರ ಮಾಡ್ತಾನೆ, ಅನ್ನೋದು ನಮಗೆ ಗೊತ್ತಾಗಬೇಕು, ಪರಮಾತ್ಮ, ಪ್ರತಿಯೊಬ್ಬ ನಿಂದಕನನ್ನೂ ಉದ್ಧಾರ ಮಾಡು ಎಂದು ಕೇಳುವ ಈ ಉದಾರ ಭಾವನೆ ನಮಗೆ ಬರಬೇಕು. ಬರಬೇಕಾದರೆ, ಆ ಸ್ತೇಯ ಭಾವನೆ ಹೋಗಬೇಕು. ಕದಿಯಬೇಕು ಅನ್ನುವ ಭಾವನೆ ಇದೆಯಲ್ಲಾ, ಅದು ಹೋಗಬೇಕು, ನಾನು  ಆಗಲೇ ಹೇಳಿದೀನಿ, ಬರೀ ಕಳ್ಳತನ ಮಾಡೋದು, ದುಡ್ಡು ಕಾಸು ಕದಿಯೋದು, ಅದೇ ಕಳ್ಳತನವಲ್ಲ, ಮಾನಸಿಕ ಕಳ್ಳತನವೂ ಕಳ್ಳತನವೇ. ಅಲ್ಲೇ ಎಲ್ಲಾ ಹುಟ್ಟೋದು, ಪುಣ್ಯ ಹುಟ್ಟೋದೂ ಅಲ್ಲೇ, ಪಾಪ ಹುಟ್ಟೋದೂ ಅಲ್ಲೇ. ಪಾಪ, ನನಗೊಬ್ಬರು ಈ ವಿಷಯ ಹೇಳಿದರು. ಒಬ್ಬ ಗುರುಗಳ ಹತ್ತಿರ ಹೋಗಿ, 'ಸ್ವಾಮಿ, ನಾನು ಸುಳ್ಳು ಹೇಳೋ ಅಭ್ಯಾಸ ಇಟ್ಟುಕೊಂಡಿದೀನಿ, ಅದು ಬಂದುಬಿಟ್ಟಿದೆ, ನಾನು ಕಳ್ಳನ ಮಗ, ನಾನು ಅಪ್ಪನಿಗೆ ತಕ್ಕ ಮಗ, ಬಂದು ಬಿಟ್ಟಿದೆ. ನನ್ನ ಉದ್ಧಾರ ಆಗಬೇಕು' ಅಂತ ಕೇಳಿದ. ಅವರು ಹೇಳಿದರು, 'ನಿನ್ನ ಉದ್ಧಾರ ನಿನ್ನ ಕೈಲೇ ಇದೆಯಪ್ಪಾ, ನಿನ್ನ ತಲೇನಾ ಸರಿಯಾಗಿ ಇಟ್ಟುಕೋ, ನೀನೇ ಉದ್ಧಾರವಾಗುತ್ತೀಯಾ. ನಿನ್ನ ತಲೆಯಲ್ಲಿ ಕೆಟ್ಟ ಯೋಚನೆ ಬರುವುದು ಬಿಟ್ಟರೆ, ಕೆಟ್ಟ ಯೋಚನೆಗೆ ಕ್ರಿಯಾ ರೂಪ ಕೊಡ್ತೀಯಾ, ಪಾಪಿಯಾಗುತ್ತೀಯ'.
     ಇಂಥಾ ಪಾಪ ಮಾಡುವುದಕ್ಕಿಂತ ಸಾವು ಬರಲಿ, ಅಂತ ಹೇಳೋದೇ ಶ್ರೇಷ್ಠ, ಕಳ್ಳ ಅಲ್ಲದವನನ್ನು ಕಳ್ಳ ಅಂತ ಕರೆಯೋದೂ ಪಾಪ, ಸ್ವತಃ ಕಳ್ಳನಾಗುವುದೂ ಪಾಪ, ಆ ಕಳ್ಳತನ ಅನ್ನುವ ದೊಡ್ಡ ಪಾಪ ಇದೆಯಲ್ಲಾ, ಅದನ್ನು ವಶದಲ್ಲಿ ಇಟ್ಟುಕೊಳ್ಳಬೇಕು, ಅಹಿಂಸಕ ನಾನು, ಬ್ರಹ್ಮಚಾರಿ ನಾನು, ಅಪರಿಗ್ರಹಿ ನಾನು, ಇತ್ಯಾದಿ ಹೇಳಿಕೊಂಡರೆ ಆಗುವುದಿಲ್ಲ, ಎಲ್ಲದರ ಬುಡದಲ್ಲಿ ಈ ಅಸ್ತೇಯವಿದೆ. ಮಾನಸಿಕವಾಗಿ ಕದ್ದರಾಯ್ತು. ಪಂಚಮಹಾವ್ರತಗಳು-ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ - ಈ ಐದರಲ್ಲಿ ಒಂದು ಕೆಟ್ಟರೂ ಕೂಡಾ ಹೋಯಿತು, ಐದೂ ಶುದ್ಧವಾಗಿರಬೇಕು. ಒಂದು ಪಾತ್ರೆಯಲ್ಲಿ ಒಂದು ಕಡೆ ತೂತು ಆಗಿದ್ದರೂ ಅದರಲ್ಲಿ ಇರುವ ಎಲ್ಲಾ ನೀರೂ ಸೋರಿಹೋಗುತ್ತೆ. ಹಾಗೇನೇ ಅಹಿಂಸೆ, ಬ್ರಹ್ಮಚರ್ಯ, ಅಪರಿಗ್ರಹ, ಆಸ್ತೇಯ, ಸತ್ಯ ಎಲ್ಲಾ ಕೊಚ್ಚಿಹೋಗುತ್ತೆ. ಯಾವುದನ್ನೂ ಕೂಡಾ ಸ್ತೇಯ ಅನ್ನೋ ಜಿಜ್ಞಾಸೆ ಇಟ್ಟುಕೊಂಡು (ಜಾಗೃತವಾಗಿರಬೇಕು). ಕಳ್ಳತನ ಯಾವುದು? ನನ್ನದಲ್ಲದ ವಸ್ತುವನ್ನು ನನ್ನದು ಅಂತ ಭಾವಿಸೋದು ಕಳ್ಳತನ. ಅರ್ಥವಾಯಿತಲ್ಲಾ? ನನ್ನದಲ್ಲ ಅದು, ಆದರೂ ಅದು ನನ್ನದು ಅಂದುಕೊಳ್ಳೋದು ಮಾನಸಿಕ ಕಳ್ಳತನ ಆಯಿತು, ಕದ್ದೇಬಿಟ್ಟರೆ ಕ್ರಿಯಾತ್ಮಕ ಆಗಿಹೋಯಿತು.
ಗುರುವೇ ಸರಿಯಿರದಿದ್ದರೆ . . . .!
     ಕಳ್ಳತನ, ಮಾಡುವುದಕ್ಕಿಂತ ಸಾಯುವುದೇ ವಾಸಿ. ನನಗೆ ಯಾರೂ ಮೋಸ ಮಾಡಬಾರದು ಅಂತಿದ್ದರೆ ನಾನು ಬೇರೆ ಯಾರಿಗೂ ಮೋಸ ಮಾಡಬಾರದು. ಆ ಭಾವನೆ ಬರುವುದೇ ಇಲ್ಲ, ನಾನು ಬೇಕಾದ್ದು ಮಾಡಿಕೊಳ್ತೇನೆ, ನನ್ನ ಶಿಷ್ಯರು, ಭಕ್ತರು ಸತ್ಯವಂತರಾಗಿರಬೇಕು ಅನ್ನೋದು. ಅವರಿಗೆಲ್ಲಿ ಬರುತ್ತೆ ಆ ಬುದ್ದಿ? ಗುರು ಅನ್ನಿಸಿಕೊಂಡೋನೆ ಬುರುಡೆ ಹೊಡೆಯುತ್ತಿದ್ದರೆ ಆ ಶಿಷ್ಯರ ತಲೆಯಲ್ಲಿ ಸತ್ಯ ಅನ್ನುವುದು ಬರುತ್ತಾ? ಯಾವತ್ತೂ ಸಾಧ್ಯವಿಲ್ಲ. ಯಾವನು ಸತ್ಯವಾದಿಯೋ ಅವನೇ ಸತ್ಯ ಪ್ರಚಾರಕನಾಗಬೇಕು. ಸುಳ್ಳು ಹೇಳೋದಾಗಿದ್ದರೆ, ಹರಿಕಥಾದಾಸರು, ಕೀರ್ತನೆಕಾರರು  ಬುರುಡೆ ಹೊಡೆಯುವುದಾಗಿದ್ದರೆ ಅವರಿಗೆ ಹಾಗೆ ಮಾಡಲು ಏನೂ ಅಧಿಕಾರವೇ ಇಲ್ಲ, ಮಾಡಿದರೂ ಪ್ರಯೋಜನವೂ ಇಲ್ಲ. ಧಾರವಾಡದ ಕಡೆಯವರು ಒಬ್ಬರು ಮಹಾರಾಷ್ಟ್ರದ ಕೆಂಪು ಟೋಪಿ ಹಾಕಿಕೊಂಡು ಕನ್ನಡದಲ್ಲಿ ಹರಿಕಥೆ ಮಾಡೋರು. ಅವರು ಹರಿಕಥೆ ಮಾಡ್ತಾ ಇದ್ದರು, ಸತ್ಯದ ಮೇಲೆ ಚೆನ್ನಾಗಿ ಲೆಕ್ಚರ್ ಕೊಡುತ್ತಿದ್ದರು. ನಾನು ಕೇಳಿದೆ ; "ನೀವು ಸತ್ಯದ ಮೇಲೆ ಇಷ್ಟೊಂದು ಚೆನ್ನಾಗಿ ಮಾತಾಡ್ತೀರಲ್ಲಾ, ನೀವು ಸತ್ಯ ಹೇಳ್ತೀರಾ?" ಅವರು ಉತ್ತರಿಸಿದ್ದು ಹೀಗೆ: "ನಾನು ಹರಿಕಥೆ ಮಾಡೋದೇ ಬುರುಡೆ, ಸತ್ಯ ನನಗೆ ಗೊತ್ತಿಲ್ಲದಂತೆ ಬಂದು ಬಿಟ್ಟಿದ್ದರೆ ನಾನು ಜವಾಬ್ದಾರನಲ್ಲ. ನಾನು ಹರಿಕಥೆ ಮಾಡೋನು, ಕಾಲಕ್ಷೇಪ ಮಾಡೋನು, ಅಷ್ಟೆ ನನ್ನ ಕೆಲಸ." ಇಂಥವರ ಉಪದೇಶದಿಂದ ಯಾರಿಗೆ ಲಾಭ? ಬೇರೆಯವರಿಗೆ ಕೂಡಾ ಕಷ್ಟ ಕೊಡಬಾರದು. ನನಗೆ ಯಾರೂ ಕಷ್ಟ ಕೊಡದೇ ಇರಲಿ ಎಂದು ಬಯಸುವುದಾದರೆ ಬೇರೆಯವರಿಗೆ ಕಷ್ಟ ಕೊಡಲು ನನಗೇನು ಹಕ್ಕಿದೆ? ಇದನ್ನು ಯಾರೂ ಯೋಚನೆ ಮಾಡುವುದಿಲ್ಲ. ಬೇರೆಯವರಿಗೆ ಬೇಕಾದಷ್ಟು ಕಷ್ಟ ಕೊಡಲಿ, ತನಗೆ ಮಾತ್ರ ಯಾರೂ ಕಷ್ಟ ಕೊಡಬಾರದು. ಈ ಭಾವನೇನೇ ಸರಿಯಿಲ್ಲ. ಇದೂ ಸ್ತೇಯವೇ.
ಪ್ರಾಣ ಬಿಟ್ಟಾರು, ಸುಳ್ಳು ಹೇಳರು
     'ನಾನು ಕಳ್ಳನಾಗಿದ್ದ ಪಕ್ಷದಲ್ಲಿ ನನಗೆ ಇವತ್ತೇ ಸಾವು ಬರಲಿ' -ಬಹಳ ದೊಡ್ಡ ಮಾತು. ಸಾಯುವುದಕ್ಕೆ ತಯಾರು, ಸುಳ್ಳು ಹೇಳಲು ತಯಾರಿಲ್ಲ, ಕಳ್ಳತನ ಮಾಡುವುದಕ್ಕೆ ತಯಾರಿಲ್ಲ, ಇಂತಹವರು ಎಷ್ಟು ಜನ ಸಿಕ್ತಾರೆ? ಸುಳ್ಳು ಅನ್ನೋ ಮಾತನ್ನು ನಾವು ಕೇಳ್ತೀವಿ, ಅದರ ಸ್ವರೂಪ ಅನ್ನುವುದು ನಮಗೆ ಗೊತ್ತಿಲ್ಲ, ಕಾರಣ ಏನು? ಒಂದೊಂದು ಸಮಯದಲ್ಲಿ ಸುಳ್ಳು ಹೇಳಬೇಕಾಗಿ ಬರುತ್ತೆ, ಉದಾಹರಣೆಗೆ,  ಒಬ್ಬರು ನೋಡಿರುತ್ತಾರೆ, ಒಂದು ಜಿಂಕೆ ಅಲ್ಲಿ ಹೋಗಿದೆ, ಅದನ್ನು ಕೊಲ್ಲುವುದಕ್ಕೆ ಹಿಂಬಾಲಿಸಿ ಒಬ್ಬ ಶಿಕಾರಿ ಬರುತ್ತಾನೆ. ಬಂದವನು ಅಲ್ಲಿ ಕೂತಿರ್ತಾರಲ್ಲ ಅವರನ್ನು ಕೇಳ್ತಾನೆ, 'ಜಿಂಕೆ ಯಾವ ಕಡೆಗೆ ಹೋಯಿತು?' ಅವನು ಹೇಳಿದರೆ ಹಿಂಬಾಲಿಸಿ ಹೋಗಿ ಜಿಂಕೆಯನ್ನು ಕೊಲ್ತಾನೆ. ಇವನು ಉತ್ತರ ಕೊಡದೆ ಮೌನವಾಗಿ ಕೂತಿದ್ದ. ಶಿಕಾರಿ ಅವನಿಗೇ ಗುಂಡು ಹಾಕಿದ. 'ಕಳ್ಳ, ಗೊತ್ತಿದ್ದರೂ ಹೇಳ್ತಾ ಇಲ್ಲ' ಅಂತ. ಪ್ರಾಣ ಬಿಡೋದಕ್ಕೆ ತಯಾರು, ಆತ 'ನನಗೆ ಗೊತ್ತಿಲ್ಲ' ಎಂದು ಸುಳ್ಳು ಹೇಳೋದಕ್ಕೆ ತಯಾರಿರಲಿಲ್ಲ.
ಯಾರು ಕಳ್ಳರು?
     ನಾವು ಯಾವನು ಕಳ್ಳತನ ಮಾಡ್ತಾನೋ ಬೀಗ ಒಡೆದು, ಬಾಗಿಲು ಮುರಿದು, ಪೆಟ್ಟಿಗೆ ಕೊಚ್ಚಿಹಾಕಿ, ಕಳ್ಳತನ ಮಾಡ್ತಾನೋ ಅವನನ್ನು ಮಾತ್ರ ಕಳ್ಳ ಅಂತ ತಿಳ್ಕೊಳ್ತೀವಿ. ನಾವು ಮನಸ್ಸಿನಲ್ಲಿ ಅಂದುಕೊಳ್ತಾ ಇರ್ತೀವಿ, ಅಯ್ಯೋ, ಅವನ ಹತ್ತಿರ ಅಷ್ಟೊಂದು ದುಡ್ಡಿದೆ, ಅದರಲ್ಲಿ ಸ್ವಲ್ಪ ಭಾಗವಾದರೂ ನನ್ನದಾಗಬಾರದಾ?' ಕದ್ದುಬಿಟ್ಟೆವಲ್ಲಾ! ಸ್ವತಃ ಕದಿಯುವುದಕ್ಕೆ ಬರುವುದಿಲ್ಲ, ಮನಸ್ಸಿನಿಂದ ಕದ್ದಿವಿ, ಎಲ್ಲಕ್ಕಿಂತಲೂ ದೊಡ್ಡ ಪಾಪ, ಮನಸ್ಸಿನಲ್ಲಿ ಪಾಪ ಮಾಡುವುದಿದೆಯಲ್ಲಾ, ಅದು ದೊಡ್ಡ ಪಾಪ. ವ್ಯಭಿಚಾರವನ್ನೇ ಮಾಡಬೇಕೆಂದಿಲ್ಲ, ಮನಸ್ಸಿನಲ್ಲಿ ಅಂದುಕೊಂಡರೂ ಸಾಕು, ಸುಳ್ಳೇ ಹೇಳಬೇಕೆಂದಿಲ್ಲ, ಹೇಳಿದರೆ ಚೆನ್ನಾಗಿತ್ತಲ್ಲಾ ಅಂತ ಮನಸ್ಸಿನಲ್ಲಿ ಬಂದರೂ ಕೂಡ ಸಾಕು. ಸುಳ್ಳು ಹೇಳಿದ ಹಾಗೇನೆ ಆಯಿತು. ಇದು ಬಹಳ ಸೂಕ್ಷ್ಮವಾದ ವಿಷಯ.
-ಕ.ವೆಂ.ನಾಗರಾಜ್.
******************
ದಿನಾಂಕ ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌: