ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜೂನ್ 29, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -6: ಆಚಾರ ಮತ್ತು ವಿಚಾರ


     ಪಂ. ಸುಧಾಕರ ಚತುರ್ವೇದಿಯವರು ವೇದದ ಹೆಸರಿನಲ್ಲಿ ನಡೆಸುವ ಅವೈದಿಕ ಆಚರಣೆಗಳ ಕುರಿತು ಅಸಮಾಧಾನಿಗಳು. ಅವರ ಮಾತುಗಳಲ್ಲಿ ಸತ್ಯದ ಪ್ರಖರತೆ ಇದೆ, ಅನ್ಯಾಯದ ಆಚರಣೆಗಳನ್ನು ಮುಲಾಜಿಲ್ಲದೆ ವಿರೋಧಿಸುವ ಕಠಿಣತೆ ಇದೆ, ಹಾಸ್ಯ, ವ್ಯಂಗ್ಯಗಳ ಲೇಪವೂ ಇದೆ. ನಾವು ಮಾಡುವ ಕ್ರಿಯೆಗಳಿಗೆ ಅರ್ಥವಿರಬೇಕು, ಗೊತ್ತಿರದಿದ್ದರೆ ತಿಳಿದುಕೊಳ್ಳಬೇಕು ಎಂಬುದು ಅವರ ಆಗ್ರಹ. ವಿನೋದಪ್ರಿಯರೂ ಆದ ಪಂಡಿತರು ಬ್ರಹ್ಮಚಾರಿಗಳು. ಬ್ರಹ್ಮಚಾರಿ ಎಂದರೆ ಕೇವಲ ಮದುವೆಯಾಗದಿರುವುದಲ್ಲ, ಬ್ರಹ್ಮನಲ್ಲಿ ಚರಿಸುವವನು ಎಂದೂ ಆರ್ಥ. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಯಾಗಿರುವ ಪಂಡಿತರನ್ನು ಒಬ್ಬರು ಅವರು ಏಕೆ ಮದುವೆಯಾಗಲಿಲ್ಲ ಎಂದು ಕೇಳಿದ್ದರಂತೆ. ಅದಕ್ಕೆ ಪಂಡಿತರು, 'ನನ್ನ ತಾರುಣ್ಯ ಅಧ್ಯಯನ ಮತ್ತು ಸ್ವಾತಂತ್ರ್ಯ ಹೋರಾಟಗಳಲ್ಲಿ ಕಳೆಯಿತು. ಸುಮಾರು 15 ವರ್ಷಗಳು ಜೈಲಿನಲ್ಲಿದ್ದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ 51 ವರ್ಷಗಳಾಗಿದ್ದವು. ಆ ವಯಸ್ಸಿನಲ್ಲಿ ನನಗೆ ಯಾರು ಹೆಣ್ಣು ಕೊಡುತ್ತಾರೆ?' ಎಂದು ಹಾಸ್ಯವಾಗಿ ಉತ್ತರಿಸಿದ್ದರಂತೆ! ಇವರ ವಿಚಾರಧಾರೆಯ 6ನೆಯ ಕಂತು ಇಲ್ಲಿದೆ.
****************
ಆಚಾರ-ವಿಚಾರ
     ಕೆಲವರು ಸಂಪ್ರದಾಯಸ್ಥ ಮಡಿವಂತರಿರುತ್ತಾರೆ. ಅವರು ಸ್ನಾನ ಮಾಡಿಕೊಂಡು ಬರುವಾಗ ಎದುರಿಗೆ ಇತರರು ಬರುವಂತೆಯೇ ಇಲ್ಲ. ಬ್ರಾಹ್ಮಣರ ಪೈಕಿಯೂ ಇತರ ಪಂಗಡದವರು ಬಂದರೂ, 'ನಮಸ್ಕಾರ ಆಚಾರ್ರೇ, ದೀಕ್ಷಿತರೇ' ಅಂತ ಹೇಳಿಬಿಡ್ತಾರೆ. ಅವರು ಹೋದ ನಂತರ ಬಚ್ಚಲು ಮನೆಗೆ ಹೋಗಿ ಪುನಃ ಸ್ನಾನ ಮಾಡಿಕೊಂಡು 'ಶುಚಿಯಾದೆ' ಅಂದುಕೊಳ್ಳುತ್ತಾರೆ! ಪಕ್ಕದ ಮನೆಯಲ್ಲಿ ಬಿಡುವ ಹೂವು ಕದ್ದು ಕಿತ್ತು ದೇವರಿಗೆ ಪೂಜೆ ಮಾಡುತ್ತಾರೆ. ಇದರಿಂದ ಪುಣ್ಯ ಬರುತ್ತದೆಯೇ? ಇದರಲ್ಲಿ ಎರಡು ಪಾಪದ ಕೆಲಸ ಆಗುತ್ತದೆ. ಹೂವನ್ನು ಕದ್ದು ಕಿತ್ತಿದ್ದೊಂದು ಪಾಪ, ಇನ್ನೂ ಅರಳದಿರುವ ಹೂವು, ಅಲ್ಲೇ ಇದ್ದಿದ್ದರೆ ಪೂರ್ತಿ ಅರಳಿ ಬೀಳುವವರೆಗೆ ಎಷ್ಟು ಪರಿಮಳ ಬೀರಿ ಮುದ ತರುತಿತ್ತೋ, ಆ  ಹೂವನ್ನು ಕಿತ್ತು ಬಾಡಿಸಿದ್ದು ಇನ್ನೊಂದು. ಅದನ್ನು ಕಿತ್ತರೆ ಅದಕ್ಕೆ ನೋವಾಗುತ್ತದೆ, ನಮಗೆ ಗೊತ್ತಾಗುವುದಿಲ್ಲ.  ನಾನು ಹೇಳುವುದು ನಿಮಗೆ ಇಷ್ಟವಾಗದೇ ಹೋಗಬಹುದು, ನಿಮಗೆ ಕೋಪ ಬರಬಹುದು. ಆದರೆ, ಹೀಗೆ ಆಲೋಚನೆ ಮಾಡಿ ಯಾರು ನಡೆದುಕೊಳ್ಳುತ್ತಾರೊ ಅವರನ್ನು ಮನುಷ್ಯ ಅಂತ ಕರೆಯಬಹುದು, ಆಲೋಚನೆ ಮಾಡದಿರುವವರು ಕೇವಲ ಮನುಷ್ಯರ ಆಕಾರ ಹೊಂದಿರುವವರು ಅಷ್ಟೆ.
ಯಾವ ಶಾಸ್ತ್ರ?
    ಮನಸ್ಸಿನಲ್ಲಿ ಎಲ್ಲರೂ ಸುಖವಾಗಿರಲಿ ಅನ್ನುತ್ತೇವೆ, ಆದರೆ  'ನಾವು' ಅನ್ನುವುದನ್ನು ಬಿಡುವುದಿಲ್ಲ. ನಮ್ಮ ಸ್ವಾರ್ಥವನ್ನು ನಾವು ಬಿಡುವುದಿಲ್ಲ. 'ಗೋಬ್ರಾಹ್ಮಣೇಭ್ಯಃ ಶುಭಂಭವತು' ಅಂತೀವಿ, ಗೋವು, ಬ್ರಾಹ್ಮಣರಿಗೆ -ಅವರೂ ಒಂದು ತರಹ ಪ್ರಾಣಿಗಳೇ ಅಂದುಕೊಳ್ಳಿ - ಶುಭವಾಗಲಿ ಅಂತ. ಈ ಗೋವು, ಬ್ರಾಹ್ಮಣರು ಈ ಪ್ರಪಂಚದಿಂದ ಹೊರಗಿದ್ದಾರೆಯೇ? 'ಲೋಕಾ:ಸಮಸ್ತಾಃ ಸುಖಿನೋಭವಂತು' ಎಂದು ವೇದ ಹೇಳುತ್ತಿರುವಾಗ ಇವೆರಡನ್ನು ಮಾತ್ರಾ ಎತ್ತಿ ಏಕೆ ತೋರಿಸಬೇಕು? ಹೀಗೆ ತಂದೆಗೆ ಹೇಳಿದಾಗ ಅವರಿಗೆ ಬಹಳ ಕೋಪ ಬರುತ್ತಿತ್ತು. 'ಏನಪ್ಪಾ ನೀನು, ಶಾಸ್ತ್ರಕ್ಕೆ ವಿರುದ್ಧವಾಗಿ ಮಾತನಾಡುತ್ತೀ' ಅನ್ನುತ್ತಿದ್ದರು. 'ಅದು ಯಾವ ಶಾಸ್ತ್ರ?' ಅಂತ ಕೇಳಿದರೆ ಅವರಿಗೆ ಸರಿಯಾಗಿ ಉತ್ತರ ಕೊಡಲಾಗುತ್ತಿರಲಿಲ್ಲ, 'ಶಾಸ್ತ್ರ ಅಂದರೆ ಶಾಸ್ತ್ರ ಕಣಯ್ಯಾ' ಎಂದು ಸಿಡುಕುತ್ತಿದ್ದರು. ನನ್ನ ತಾಯಿ, 'ಅವನ ಮೇಲೆ ಏಕೆ ಸಿಡುಕುತ್ತೀರಿ? ಗೊತ್ತಿದ್ದರೆ ಉತ್ತರ ಹೇಳಿ, ಇಲ್ಲದಿದ್ದರೆ ಸುಮ್ಮನಿರಿ' ಎಂದು ಅನ್ನುತ್ತಿದ್ದರು. ಸಂಸ್ಕೃತದಲ್ಲಿ ಇರುವುದೆಲ್ಲಾ ಶಾಸ್ತ್ರವಾ?  ಇವೆಲ್ಲಾ ಆಲೋಚನೆ ಮಾಡಿದರೆ ಮಾತ್ರ ಗೊತ್ತಾಗುವುದೇ ಹೊರತು, ಇಲ್ಲದಿದ್ದರೆ ಗೊತ್ತಾಗುವುದಿಲ್ಲ.
ಹೇಳುವುದು ಒಂದು . . .
   ನಾವು ಸತ್ಕರ್ಮಕ್ಕೆ ವಿಮುಖರಾಗದಿರೋಣ, ಐಶ್ವರ್ಯ ಇದ್ದಾಗ ಆಡಂಬರದಿಂದ ಹಬ್ಬ, ನಾಮಕರಣ, ಉಪನಯನ, ಮದುವೆ, ಇತ್ಯಾದಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಬಡವ ಏನು ಮಾಡಬೇಕು? ಬಡವ, ಭಾಗ್ಯವಂತ ಎಲ್ಲಾ ನಾವು ಮಾಡಿಕೊಂಡಿರೋದು, ಬೆಂಕಿಯಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಆಕಾಶದಲ್ಲಿ, ನೀರಿನಲ್ಲಿ ಎಲ್ಲಾ ಕಡೆ ಐಶ್ವರ್ಯ ತುಂಬಿಕೊಂಡಿದೆ. ಬುದ್ಧಿಹೀನರಾದ ನಾವು ಆ ಐಶ್ವರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ. ವಾಯುವಿನಲ್ಲಿ ಪ್ರಾಣ ಕೊಡುವ ಶಕ್ತಿ ಇದೆ. ಜನ ಹೋಮ, ಹವನ ಮಾಡಿ ಗಾಳಿಯಲ್ಲಿ ಶುದ್ಧತೆ ಹರಡುವುದಿಲ್ಲ, ಬೀಡಿ, ಸಿಗರೇಟು, ಚುಟ್ಟಾ ಸೇದಿ ಗಾಳಿಯಲ್ಲಿ ಹೊಗೆ ಬಿಟ್ಟು ಅವರೂ ಹಾಳಾಗಿ ನಮ್ಮಂತಹವರನ್ನೂ ಹಾಳು ಮಾಡುತ್ತಾರೆ. ಯಾತಕ್ಕೆ? ಪಂಚಭೂತಗಳನ್ನು ಶುದ್ಧವಾಗಿಡಲು ಕರ್ಮ ಮಾಡಬೇಕು. ಯಜ್ಞ ಮಾಡುವುದಕ್ಕೆ ತುಪ್ಪ ಇಲ್ಲ, ಯಾವುದೋ ಎಣ್ಣೆ ಹಾಕುವುದು, ಅದೂ ಇಲ್ಲ, ವನಸ್ಪತಿ,  ಹಾಕಬೇಕಾದ ಸಮಿತ್ತು ಇಲ್ಲ, ಯಾವುದೋ ಕಡ್ಡಿ ಹಾಕಿದರಾಯಿತು. ಈ ರೀತಿ ಮಾಡಿದರೆ ಸರಿಯೇ? ಅದರಲ್ಲಿ ಸತ್ವ ಇಲ್ಲ. ಹಾಕಬೇಕಾದ್ದನ್ನು ಹಾಕದೆ ಬಿಟ್ಟು ಯಜ್ಞ ಮಾಡಿದರೇನು, ಬಿಟ್ಟರೇನು! ನನಗೆ ಗೊತ್ತಿರುವ ಒಂದು ಕುಟುಂಬ ಇದೆ, ಒಮ್ಮೆ ಅವರ ಮನೆಯಲ್ಲಿ ಯಜ್ಞ ಮಾಡುವಾಗ ಮನೆಯ ಯಜಮಾನಿಯಾದ ಅಜ್ಜಿ -ಅವರೂ ಉಪಾಧ್ಯಾಯಿನಿ ಆಗಿದ್ದವರು- ತನ್ನ ಅಳಿಯನಿಗೆ ತುಪ್ಪ ತರಲು ಹೇಳಿದರು. ಅವರು ಅಡಿಗೆ ಮನೆಯಿಂದ ತುಪ್ಪ ತಂದರೆ, 'ಅದಲ್ಲಾ, ಅದು ತಿನ್ನುವ ತುಪ್ಪ, ಯಜ್ಞಕ್ಕೆ ಅಂತ ಇಟ್ಟಿರುವ ಬೇರೆ ತುಪ್ಪ ತನ್ನಿ' ಅಂತ ಹೇಳಿದರು. ಇಂಥ ಯಜ್ಞ ಯಾಕೆ ಮಾಡಬೇಕು? ಮಾಡಲೇಬಾರದು. ಬದಲಿಗೆ ನಾಸ್ತಿಕರಾಗಿ, ನಾನು ಒಪ್ಪುತ್ತೇನೆ. ಆಸ್ತಿಕತೆ ಹೆಸರಿನಲ್ಲಿ ಎಲ್ಲರ ತಲೆ ಬೋಳಿಸುವ ಕೆಲಸ ಇದೆಯಲ್ಲಾ, ಅದು ಮಹಾ ಪಾಪ. ಒಬ್ಬರು ಮಹಾಶಯರು ಹೇಳಿದ್ದರು, 'ನೀನು ನಾಸ್ತಿಕ ಕಣಯ್ಯಾ' ಅಂತ. 'ಆಗಲಿ, ನಿಮ್ಮ ಆಶೀರ್ವಾದದಿಂದ ನಾನು ನಾಸ್ತಿಕನಾಗೇ ಇರುತ್ತೇನೆ' ಎಂದು ಉತ್ತರಿಸಿದ್ದೆ.
     [ಟಿಪ್ಪಣಿ: ಬೂಟಾಟಿಕೆಯ ನಡವಳಿಕೆಗಳಿಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಮಾರುಕಟ್ಟೆಗಳಲ್ಲಿ, ದೇವಸ್ಥಾನಗಳ ಸಮೀಪದಲ್ಲಿ ದೇವರಿಗೆ ನೈವೇದ್ಯ ಕೊಡುವ ಸಲುವಾಗಿಯೇ ಮಾರಾಟ ಮಾಡುವ ಕಾಯಿ, ಹೂವು, ಹಣ್ಣುಗಳನ್ನು ಗಮನಿಸಿ. ಆ ಬಾಳೆಹಣ್ಣುಗಳು ಹಣ್ಣೇ ಆಗಿರುವುದಿಲ್ಲ, ಕಾಯಿ ಆಗಿರುತ್ತದೆ, ಅಲ್ಲದೆ ಪುಟ್ಟ ಗಾತ್ರದವು. ನಾವೇ ತಿನ್ನುವುದಾದರೆ ಅಂತಹವುಗಳನ್ನು ನಾವು ಕೊಳ್ಳುವುದೇ ಇಲ್ಲ. ಮದುವೆ, ಸಮಾರಂಭಗಳು, ಇತ್ಯಾದಿಗಳಲ್ಲಿ ಉಡುಗೊರೆ ಕೊಡುವ ಸಲುವಾಗಿಯೇ ಕಡಿಮೆ ದರದ, ಕಡಿಮೆ ಅಳತೆಯ ಬಟ್ಟೆಗಳನ್ನು, ಪದಾರ್ಥಗಳನ್ನು ಕೊಳ್ಳುತ್ತೇವೆ. ಉಡುಗೊರೆ ಪಡೆದವರೂ ಅದನ್ನು ಉಪಯೋಗಿಸಲಾರರು. ಅದನ್ನು ಬೇರೊಬ್ಬರಿಗೆ ಉಡುಗೊರೆಯಾಗಿ ದಾಟಿಸಿಬಿಡುತ್ತಾರೆ! ದೇವರಿಗೆ, ಇನ್ನೊಬ್ಬರಿಗೆ ಕೊಡುವುದಾದರೆ ಒಂದು ತರಹ, ನಮಗೇ ಅದರೆ ಮತ್ತೊಂದು ತರಹ! ಕೊಡುವುದಾದರೆ ನಾವು ಉಪಯೋಗಿಸುವಂತಹುದೇ ಕೊಡೋಣ, ಇಲ್ಲದಿದ್ದರೆ ಕೊಡದಿರುವುದೇ ಒಳ್ಳೆಯದಲ್ಲವೇ?]
ಸ್ತ್ರೀಯರು ಮತ್ತು ವೇದ
     ನಮ್ಮ ತಾಯಿ, ತಂದೆ ರಾತ್ರಿ ಹೊತ್ತು ಹವನಕ್ಕೆ ಕುಳಿತುಕೊಳ್ಳೋರು, ತಂದೆ ಮಂತ್ರ ಹೇಳೋರು, ತಾಯಿ ಬಾಯಿ ಮುಚ್ಚಿಕೊಂಡು ಕೂರೋರು, ನಾನು ಕೇಳ್ತಾ ಇದ್ದೆ, "ಅಮ್ಮಾ, ಯಾಕೆ ಹೀಗೆ? ನೀನು ಏಕೆ ಮಂತ್ರ ಹೇಳೊದಿಲ್ಲ?" ಅವರು ಹೇಳುತ್ತಿದ್ದರು: "ಅಯ್ಯೋ, ಹೆಂಗಸರು ವೇದ ಹೇಳೋದು ಉಂಟಾ? ಮಹಾ ಪಾಪ." ಉತ್ತರ ಕೊಡೋಕ್ಕೆ ಆಗದೇ ಹೋದರೆ ಇಂತಹಾ ಮಾತುಗಳನ್ನು ಆಡುವ ಇತರ ಪಂಡಿತರೆನಿಸಿಕೊಂಡವರ ಮಾತನ್ನೇ ಅವರು ಹೇಳಿದ್ದರು.  ವೇದದಲ್ಲಿ ಋಷಿಗಳಿದ್ದಾರಲ್ಲಾ, ಹಾಗೆಯೇ ಋಷಿಕೆಯರೂ ಇದ್ದಾರೆ. ಋಗ್ವೇದದಲ್ಲಿ 97 ಋಷಿಕೆಯರನ್ನು ಗುರುತಿಸಿದ್ದೇನೆ. ಇನ್ನು ಅಥರ್ವವೇದ, ಯಜುರ್ವೇದ ಇವನ್ನೆಲ್ಲಾ ತೆಗೆದುಕೊಂಡರೆ ಇನ್ನು ಎಷ್ಟು ಜನ ಋಷಿಕೆಯರನ್ನು ಗುರುತಿಸಬಹುದು ಊಹಿಸಿ. ಅವರೆಲ್ಲಾ ಪಾಪ ಮಾಡಿದರಾ? ಋಷಿಕೆಯರೆಲ್ಲಾ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿದ್ದಾರೆ, ಅವರೆಲ್ಲಾ ಪಾಪ ಮಾಡಿದವರಾ? ಅವರೆಲ್ಲಾ ಪಾಪ ಮಾಡಿದ್ದರೆ ಅವರ ಹಿಂದೆಯೇ ನಾವೂ ಹೋಗೋಣ, ಈ ಪುಣ್ಯಾತ್ಮರು ಇದ್ದಾರಲ್ಲಾ, ಅವರು ಇಲ್ಲೇ ಇರಲಿ, ನಾವು ಪಾಪ ಮಾಡಿದೋರ ಜೊತೆ ಹೋಗೋಣ!
ಪ್ರಾಣಿಬಲಿ
     ಯಜ್ಞ ಅಂದಕೂಡಲೆ ಪಶುಬಲಿ ಬೇಕೇಬೇಕು ಅಂತಾರೆ. ಯಾವ ಯಜ್ಞ ಹಿಂಸೆಯಿಂದ ಕೂಡಿರುವುದಿಲ್ಲವೋ -ಅಧ್ವರ, ಅಂದರೆ ಹಿಂಸೆಯಿಲ್ಲದ್ದು- ಅದೇ ಯಜ್ಞ ಎಂದು ವೇದದಲ್ಲಿ ಸ್ಪಷ್ಟವಾಗಿದೆ. ಯಜ್ಞಕ್ಕೆ ಬಲಿ ಕೊಡುವ ಪದ್ಧತಿ ಏಕೆ, ಹೇಗೆ ಸೇರಿತೋ ಗೊತ್ತಿಲ್ಲ. ಕೋಣಬಲಿ ಕೊಟ್ಟರೆ ಶ್ರೇಷ್ಠವಂತೆ, ಅದರಿಂದ ಸೂರ್ಯದೇವನಿಗೆ ತೃಪ್ತಿಯಾಗುತ್ತಂತೆ! ಕಾಲಕಾಲಕ್ಕೆ ಮಳೆ, ಬೆಳೆ ಕೊಡುತ್ತಾನಂತೆ! ಅದು ಹೇಗೆ ತೃಪ್ತಿಯಾಗುತ್ತೋ! ಅದಕ್ಕಾಗಿ ಪಾಪ, ಆ ಕೋಣನನ್ನು ಬಲಿಕೊಡಬೇಕೆ? ನಾನು . . . . ಸಮೀಪದ ಒಂದು ಮಠದ ಮುಖ್ಯಸ್ಥ . . .ರನ್ನು ಕೇಳಿದೆ: 'ಸ್ವಾಮಿ, ನೀವು ಯಾಕೆ ಪ್ರಾಣಿಹಿಂಸೆ ಮಾಡ್ತೀರಿ?' ಅವರು ಹೇಳಿದರು: 'ನಾವು ಎಲ್ಲಾ ಪ್ರಾಣಿಗಳನ್ನೂ ಬಲಿ ಕೊಡಲ್ಲ, ಸಸ್ಯಾಹಾರಿ, ಸಾಧು ಪ್ರಾಣಿ ಮಾತ್ರ ಬಲಿ ಕೊಡ್ತೀವಿ, ಅವು ಶುದ್ಧವಾಗಿರುತ್ತವೆ, ಅವನ್ನು ಬಲಿ ಕೊಟ್ಟರೆ ಸೂರ್ಯನಾರಾಯಣನಿಗೆ ತೃಪ್ತಿಯಾಗುತ್ತೆ'. ನಾನು ಹೇಳಿದೆ: 'ನನ್ನ ಜೊತೆಗೆ ಬನ್ನಿ, ಕೆಲವು ತಿಂಗಳು ನಿಮಗೆ ವಡೆ, ಚಕ್ಕುಲಿ, ಏನೂ ಕೊಡಲ್ಲ, ಬರೀ ಹುಲ್ಲೇ ತಿನ್ನಿಸಿ ಆಮೇಲೆ ಯಜ್ಞಕ್ಕೆ ಬಲಿ ಕೊಡುತ್ತೇನೆ, ಸೂರ್ಯದೇವನಿಗೆ ತುಂಬಾ ಸಂತೋಷ ಆಗುತ್ತೆ'. ಅವರು 'ಅಯ್ಯೋ, ನಾನು ಮನುಷ್ಯ' ಅಂದರು. 'ಮನುಷ್ಯ ಎಂದು ಏಕೆ ಹೇಳುತ್ತೀರಿ? ಮನುಷ್ಯ ಜಾತಿಗೆ ಏಕೆ ಅವಮಾನ ಮಾಡುತ್ತೀರಿ? ಆಲೋಚನೆ ಮಾಡಿ ಕೆಲಸ ಮಾಡುವವನು ಮನುಷ್ಯ ಎಂದು ಶಾಸ್ತ್ರ ಹೇಳುತ್ತೆ. ಆಲೋಚನೆ ಮಾಡದೆ ಕೆಲಸ ಮಾಡುವ ನೀವು ಹೇಗೆ ಮನುಷ್ಯ?' ಎಂದು ಕೇಳಿದೆ. ಯಜ್ಞ ಶ್ರೇಷ್ಠವಾದ ಕರ್ಮ. ಅಂತಹ ಯಜ್ಞದ ಹೆಸರಿನಲ್ಲಿ ಇಂತಹ ಪಾಪ ಏಕೆ ಮಾಡಬೇಕು? ಯಾವತ್ತೂ ಮಾಡಬಾರದು. 'ದೇವೋ ದುರ್ಬಲ ಘಾತಕಃ' ಅನ್ನುತ್ತಾರೆ. ಜಗತ್ತಿನ ಎಲ್ಲಾ ಜೀವಿಗಳೂ ದೇವರ ಮಕ್ಕಳೇ ಆಗಿರುವಾಗ ಅವನ ಮಕ್ಕಳ ಬಲಿಯನ್ನು ಅವನೇ ಬಯಸುವನೇ? ಪಶುಬಲಿಯಿಂದ ತೃಪ್ತನಾಗುವ ದೇವರು ದೇವರೇ ಅಲ್ಲ.
ಸತ್ಯಂ ಬ್ರೂಯಾತ್. . .
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ'. ಸತ್ಯ ಹೇಳಬೇಕು, ಆದರೆ ಆ ಸತ್ಯವನ್ನು ಹಿತವಾಗಿ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು ಎಂದು ಇದರ ಅರ್ಥ. ಕುಂಟನನ್ನು ಕುಂಟ ಎಂದರೆ, ಕುರುಡನನ್ನು ಕುರುಡ ಎಂದರೆ ಅದು ಸತ್ಯ ಇದ್ದರೂ ಕೇಳಿಸಿಕೊಂಡವರಿಗೆ ನೋವಾಗುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದರು, ಕುರುಡನನ್ನು ಪ್ರಜ್ಞಾಚಕ್ಷು ಎನ್ನಬೇಕು ಎಂದು. ಮಹರ್ಷಿ ದಯಾನಂದರ ಗುರು ಸ್ವಾಮಿ ವಿರಜಾನಂದರೂ ಕುರುಡರೇ. ಅವರು ನಿಜಕ್ಕೂ ಪ್ರಜ್ಞಾಚಕ್ಷುಗಳಾಗಿದ್ದರು. ಒಬ್ಬ ಕಳ್ಳ ಒಬ್ಬ ಗುರು ಹತ್ತಿರ ಉಪದೇಶ ಕೇಳಲು ಹೋಗುತ್ತಿದ್ದನಂತೆ. ಸತ್ಯವನ್ನೇ ಹೇಳಬೇಕು ಎಂಬ ಗುರುಗಳ ಮಾತನ್ನು ಕೇಳಿದ ಕಳ್ಳ, 'ನಾನು ನಿಜ ಹೇಳಿದರೆ ನನ್ನ ಜೀವನ ಹೇಗೆ ನಡೆಯಬೇಕು ಸ್ವಾಮಿ' ಅಂದಾಗ ಗುರು ಹೇಳಿದರು: 'ಸತ್ಯದ ಮಾರ್ಗದಲ್ಲಿ ನಡೆಯದಿದ್ದರೂ ಪರವಾಗಿಲ್ಲ, ಯಾರಾದರೂ ಕೇಳಿದರೆ ಸತ್ಯವನ್ನೇ ಹೇಳು'. ಅವನು ಒಮ್ಮೆ ದಾರಿಯಲ್ಲಿ ಹೋಗುತ್ತಿರುವಾಗ ಅವನನ್ನು ಒಬ್ಬರು ಕೇಳಿದರು: 'ಯಾವ ಕಡೆಗೆ ಪ್ರಯಾಣ?' ಆಗ ಕಳ್ಳ 'ಇಂಥವರ ಮನೆಗೆ ಕನ್ನ ಹಾಕಲು ಹೋಗುತ್ತಿದ್ದೇನೆ' ಎಂದು ಸತ್ಯ ಹೇಳಿದರೆ ಏನಾಗುತ್ತದೆ? ಅವನು ಸೀದಾ ಹೋಗುವುದು ಪೋಲಿಸ್ ಸ್ಟೇಷನ್ನಿಗೆ, ಆಮೇಲೆ ಜೈಲಿಗೆ! ಆದ್ದರಿಂದ, ಸತ್ಯದ ಮಾರ್ಗದಲ್ಲೂ ನಡೆಯಬೇಕು, ಸತ್ಯವನ್ನೂ ನುಡಿಯಬೇಕು.
ಯಾರು ಆರ್ಯರು?
     ಯಾವನು ಪ್ರಗತಿಶೀಲನೋ, progressive view ಯಾರಿಗೆ ಇರುತ್ತೋ ಅವನನ್ನು ಆರ್ಯ ಅನ್ನಬಹುದು. ನಾವು ಹಾಗಲ್ಲ, ಆರ್ಯ(gentleman)  ಅಂತ  ಹೇಳಿಕೊಳ್ತೇವೆ, ನಮ್ಮ ವೃತ್ತಿ ನೋಡಿದರೆ ಎಲ್ಲಾ ಅನಾರ್ಯರ ರೀತಿಯೇ! ಮತ್ತು ಆರ್ಯನಾಗಿರುವವನು ಪ್ರಗತಿಶೀಲನಾಗಿರಬೇಕು, progressive ಆಗಿರಬೇಕು. ಇವತ್ತು ಇರುವುದಕ್ಕಿಂತ ಹೆಚ್ಚು ಒಳ್ಳೆಯವನಾಗುತ್ತಿರಬೇಕು, ಹೆಚ್ಚು ಸತ್ಯವಂತನಾಗಬೇಕು, ಧರ್ಮಾತ್ಮನಾಗಬೇಕು ಅನ್ನುವ ಮನೋಭಾವ ಇರಬೇಕು. ಅದೇ ಇಲ್ಲದೇ ಹೋದರೆ? ಅಂತಹವರನ್ನು ಆರ್ಯ ಎನ್ನಲು ಸಾಧ್ಯವೇ?
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌:

  1. ಯಮನಪ್ಪ
    ಹೇಳುವ ವಿಚಾರ ಚೆನ್ನಾಗಿದೆ , ಆದರೆ ಇಂದು ಅದು ಬೇರೆಯೆ ಅರ್ಥ ಸೂಚಿಸುತಿದೆ ಅಂದರೆ ಬಳಕೆಯ ದೃಷ್ಟಿಯಲಿ ಒಂದು ಅರ್ಥವಾದರೆ ಮತ್ತೊಂದು ಬಗೆಯಲಿ ಅದು ಹೀಗೆ ವಿಶಾಲಾರ್ಥ ವಿಚಿತ್ರ ಅನಿಸುತಿದೆ ಇದನ್ನು ಹೇಗಾದರೂ ಬಳಸಿಕೊಳ್ಳಬಹುದಿದೆ ಅದು ದುರಂತವಾಗಿದೆ. ಅದು ಜಾತಿ ಸೂಚಕ ಪದವಾಗಿ ಚಲ್ತಿಗೊಳ್ಳುತಿದೆ ಇದು ದುಃಖದ ಸಂಗತಿ.

    ಪ್ರತ್ಯುತ್ತರಅಳಿಸಿ