ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಜುಲೈ 17, 2014

ಮೋಸಗಾರ ಮತ್ಸರ

     ತಿಮ್ಮಣ್ಣ ಮತ್ತು ಬೊಮ್ಮಣ್ಣ ಇಬ್ಬರೂ ಆತ್ಮೀಯ ಸ್ನೇಹಿತರು. ಕ್ರಮೇಣ ತಿಮ್ಮಣ್ಣನಿಗೆ ಬೊಮ್ಮಣ್ಣ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಬೊಮ್ಮಣ್ಣನಿಗೂ ಒಮ್ಮೊಮ್ಮೆ ತಿಮ್ಮಣ್ಣನಿಗೆ ಹೆಚ್ಚು ಪ್ರ್ರಾಧಾನ್ಯತೆ ಸಿಗುತ್ತಿದೆಯೆಂದು ಅನ್ನಿಸಿ ಕಿರಿಕಿರಿಯಾಗುತ್ತಿತ್ತು. ಇಬ್ಬರೂ ಪ್ರತ್ಯೇಕವಾಗಿ ದೇವರಲ್ಲಿ ಪ್ರಾರ್ಥಿಸಿದರು. ದೇವರು ಇವರ ಭಕ್ತಿಗೆ ಮೆಚ್ಚಿ ಅವರ ಇಷ್ಟಾರ್ಥದ ಬಗ್ಗೆ ವಿಚಾರಿಸಿದ. ತಿಮ್ಮಣ್ಣ ತಾನು ದೊಡ್ಡ ಶ್ರೀಮಂತ ವ್ಯಕ್ತಿಯಾಗಬೇಕು ಎಂದು ಕೇಳಿಕೊಂಡ. ದೇವರು ತಥಾಸ್ತು ಎಂದು ಬೊಮ್ಮಣ್ಣನನ್ನು ವಿಚಾರಿಸಲು ಹೋದ. ಬೊಮ್ಮಣ್ಣ ತಿಮ್ಮಣ್ಣನಿಗೆ ಏನು ವರ ಕೊಟ್ಟಿದ್ದರೂ ಅದರ ಎರಡರಷ್ಟು ನನಗೆ ಸಿಗುವಂತೆ ವರ ಕೊಡು ಎಂದು ಕೇಳಿಕೊಂಡ. ದೇವರು ಆಗಲೂ ತಥಾಸ್ತು ಎಂದ. ತಿಮ್ಮಣ್ಣ ದೊಡ್ಡ ಬಂಗಲೆ ಬಂದರೆ ಬೊಮ್ಮಣ್ಣನಿಗೆ ಅಂತಹುದೇ ಎರಡು ಬಂಗಲೆಗಳು ಬಂದವು. ಅವನಿಗೆ ಒಂದು ಐಷಾರಾಮಿ ಕಾರು ಇದ್ದರೆ ಇವನಿಗೆ ಎರಡು ಕಾರುಗಳು ಬಂದವು. ತಾನು ಏನು ಬಯಸಿದರೂ ಅದರ ಎರಡರಷ್ಟು ಬೊಮ್ಮಣ್ಣನಿಗೆ ಸಿಗುತ್ತಿರುವುದು ಕಂಡು ತಿಮ್ಮಣ್ಣನ ಮತ್ಸರ ಹೆಚ್ಚಾಯಿತು. ಯೋಚಿಸಿ 'ತನ್ನ ಒಂದು ಕಣ್ಣು ಹೋಗಲಿ' ಎಂದು ಕೇಳಿಕೊಂಡ. ತನ್ನ ಒಂದು ಕಣ್ಣು ಹೋದರೆ, ಬೊಮ್ಮಣ್ಣನ ಎರಡು ಕಣ್ಣುಗಳೂ ಹೋದವು. ತನ್ನ ಒಂದು ಕಾಲು ಹೋಗಲಿ ಎಂದು ಕೇಳಿಕೊಂಡಾಗ ತನ್ನ ಒಂದು ಕಾಲು ಹೋದರೂ ಬೊಮ್ಮಣ್ಣನ ಎರಡು ಕಾಲುಗಳೂ ಹೋದದ್ದನ್ನು ಕಂಡು ಖುಷಿಪಟ್ಟ. ಇದು ಕೇವಲ ಕಲ್ಪನೆಯ ಕಥೆಯಾದರೂ ಇದರ ಹಿಂದಿನ ವಿಚಾರ ಮನುಷ್ಯನ ಸ್ವಭಾವದ ಕೈಗನ್ನಡಿಯಾಗಿದೆ. ತನ್ನ ಒಂದು ಕಣ್ಣು ಹೋದರೂ ಪ್ರತಿಸ್ಪರ್ಧಿಯ ಎರಡು ಕಣ್ಣುಗಳೂ ಹೋಗಬೇಕೆಂಬ ಮನೋಭಾವವೇ ಮತ್ಸರದ ವಿಕೃತ ರೂಪ. ಮನುಷ್ಯನ ಆರು ಶತ್ರುಗಳಲ್ಲಿ ಒಂದೆಂದು ಪರಿಗಣಿತವಾದ ಈ ಮತ್ಸರ ಅವನನ್ನು ಮೂರ್ಖನನ್ನಾಗಿಸಿ ಕೆಳಗೆ ಬೀಳಿಸುತ್ತದೆ, ಆತ್ಮೀಯರಿಗೇ ದ್ರೋಹ ಬಗೆಯುವಂತೆ ಮಾಡುತ್ತದೆ. ಯಾವುದೇ ರೀತಿಯಲ್ಲಿ ಒಳಿತು ಮಾಡದ, ಕೆಡುಕನ್ನೇ ತರುವ ಮನುಷ್ಯನ ಗುಣ ಯಾವುದಾದರೂ ಇದ್ದರೆ ಅದು ಮತ್ಸರವೇ.
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ|| 
     ಮತ್ಸರ ಅನ್ನುವುದು ಮಾನವ ಸಂಬಂಧಗಳಲ್ಲಿ ಋಣಾತ್ಮಕ ಚಿಂತನೆಗಳಿಂದ, ಅಭದ್ರತೆಯ ಭಾವನೆಯಿಂದ, ಮುಂದೆ ತಮಗೆ ಹಿನ್ನಡೆಯಾಗಬಹುದು ಎಂಬ ಅನಿಸಿಕೆ, ಇತ್ಯಾದಿಗಳಿಂದ ಉಂಟಾಗುವ ಒಂದು ಮನೋಸ್ಥಿತಿ ಎನ್ನಬಹುದು. ಸುಮಾರು ಐದು ತಿಂಗಳ ಮಗುವಿನ ಹಂತದಿಂದಲೂ ಈ ಮತ್ಸರ ಇರುವುದನ್ನು ಗಮನಿಸಬಹುದು. ಒಂದು ಮಗು ತನ್ನ ಕೈಯಲ್ಲಿನ ಆಟಿಕೆಗಿಂತ ಇನ್ನೊಂದು ಮಗುವಿನ ಕೈಯಲ್ಲಿನ ಆಟಿಕೆಯ ಬಗೆಗೇ ಆಸಕ್ತಿ ವಹಿಸುತ್ತದೆ ಮತ್ತು ಅದೇ ಬೇಕೆಂದು ಹಟ ಮಾಡುತ್ತದೆ. ಈ ಮತ್ಸರದ ಉತ್ಪನ್ನಗಳೇ ಕೋಪ, ಹತಾಶೆ, ಅಸಹಾಯಕತೆ, ಜಿಗುಪ್ಸೆ, ಇತ್ಯಾದಿಗಳು. ಮತ್ಸರಕ್ಕೆ ಹಲವು ಕಾರಣಗಳನ್ನು ಕೊಡುತ್ತಾರೆ. ತನ್ನ ದೊಡ್ಡಸ್ತಿಕೆಯನ್ನು ಸಾಧಿಸಲು ಪ್ರತಿಸ್ಪರ್ಧಿ ಎಂದು ಭಾವಿಸುವವನನ್ನು ಹೀಗಳೆಯುವುದು, ಅವನನ್ನು ಕುಬ್ಜಗೊಳಿಸುವ ಕುತಂತ್ರಗಳನ್ನು ಮಾಡುವುದು, ಅವನ ಪ್ರಗತಿಗೆ ಅಡ್ಡಗಾಲು ಹಾಕುವುದು, ಮುಂತಾದ ಕ್ರಮಗಳು ಮತ್ಸರದ ಪರಿಣಾಮವೇ ಆಗಿದೆ. ವೃತ್ತಿ, ಪ್ರೇಮ, ಮತ, ಧರ್ಮ, ಸಂಸ್ಕೃತಿ, ರೂಪ, ಐಶ್ವರ್ಯ, ದಾರ್ಢ್ಯತೆ, ಇತ್ಯಾದಿಗಳಲ್ಲಿ ಮತ್ಸರ ತನ್ನ ಕರಿನೆರಳು ಚಾಚುತ್ತದೆ.
     ಇಬ್ಬರ ನಡುವೆ ಮೂರನೆಯ ವ್ಯಕ್ತಿಯ ಪ್ರವೇಶ ಪ್ರೇಮ ಮತ್ಸರಕ್ಕೆ ಕಾರಣವಾಗುತ್ತದೆ. ಮೂರನೆಯ ವ್ಯಕ್ತಿಯಿಂದ ತನ್ನ ಪ್ರಾಮುಖ್ಯತೆಗೆ ಧಕ್ಕೆಯಾಗುವ, ನಂಬಿಕೆ ದ್ರೋಹವಾಗುವ ಕಲ್ಪನೆಯೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ಅತ್ತೆ, ಸೊಸೆಯರ ನಡುವೆ ವೈಮನಸ್ಯಕ್ಕೆ, ತಮ್ಮನೋ, ತಂಗಿಯೋ ಜನಿಸಿದಾಗ ಮೊದಲ ಮಗುವಿಗೆ ಅದರ ಮೇಲಿನ ಮುನಿಸಿಗೆ, ಗಂಡ-ಹೆಂಡತಿ ಅಥವ ಪ್ರೇಮಿಗಳ ನಡುವಣ ಕಲಹಗಳಿಗೆ ಮತ್ಸರ ಕಾರಣ. ಮತ್ಸರ ಒಮ್ಮೆ ಆವರಿಸಿತೆಂದರೆ ಸದ್ಗುಣಗಳಿಗೆ ಗ್ರಹಣ ಹಿಡಿಯುತ್ತದೆ, ಎಲ್ಲವೂ ತಪ್ಪಾಗಿ ಕಾಣುತ್ತದೆ, ಇನ್ನೊಬ್ಬರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ. ನೋಡುವ ನೋಟಗಳು ಬದಲಾಗುತ್ತವೆ. ಪರಸ್ಪರರಲ್ಲಿ ದ್ವೇಷ ಭುಗಿಲೇಳುತ್ತದೆ. ಕಾಳ ಮತ್ಸರದ ಚೇಳು ಕುಟುಕಿಬಿಟ್ಟರೆ ವಿಷ ಬ್ರಹ್ಮರಂಧ್ರದವರೆಗೂ ಏರಿಬಿಡುತ್ತದೆ. 
     ದಾಯಾದಿ ಮತ್ಸರ ಮಹಾಭಾರತಕ್ಕೆ ನಾಂದಿ ಹಾಡಿತು. ತನ್ನ ಮಗನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗೆ ಹೋಗುವಂತೆ ಮಾಡಿದಳು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಮತ್ಸರ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿಬಿಟ್ಟಿತ್ತು. ನಿಜಜೀವನದಲ್ಲೂ ಇಂತಹ ರಾಮಾಯಣ, ಮಹಾಭಾರತಗಳು, ಇತಿಹಾಸದ ನೆರಳುಗಳು ನೋಡಸಿಗುತ್ತವೆ. ಈಗ ಬಹುತೇಕ ಟಿವಿ ಧಾರಾವಾಹಿಗಳಲ್ಲಿ ಮತ್ಸರವೇ ಪ್ರಧಾನ ವಿಷಯ. ಆಸ್ತಿಗಾಗಿ, ಅಂತಸ್ತಿಗಾಗಿ, ಅಧಿಕಾರಕ್ಕಾಗಿ ಯಾರು ಯಾರನ್ನು ಬೇಕಾದರೂ ಕೊಲ್ಲಲು ಮಸಲತ್ತು ಮಾಡಬಹುದು ಎಂಬ ಸಂದೇಶಗಳನ್ನು ಪುಂಖಾನುಪುಂಖವಾಗಿ ತೋರಿಸಲಾಗುತ್ತಿದೆ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ತಂದೆ-ತಾಯಿಯರನ್ನು, ಮಕ್ಕಳನ್ನು, ಕೊನೆಗೆ ಏನೂ ಅರಿಯದ ಹಸು ಕಂದಮ್ಮಗಳನ್ನು ಕೊಲ್ಲಲು ಮಾಡುವ ಮಸಲತ್ತುಗಳನ್ನು, ಸಂಚುಗಳನ್ನು ತೋರಿಸುವ ರೀತಿ ಮತ್ಸರವನ್ನು ವೈಭವಿಸುವುದಲ್ಲದೇ ಮತ್ತೇನು? ಇಂತಹ ಋಣಾತ್ಮಕ ಸಂದೇಶಗಳು ಜನಮಾನಸದಲ್ಲಿ ಕುಭಾವನೆಗಳನ್ನು ಮೂಡಿಸುವುದಲ್ಲದೆ, ಜನರು ಹೀಗೆಯೇ ಇರುತ್ತಾರೆ ಎಂದು ಭಾವಿಸುವಂತೆ ಮಾಡಿ ಸಮಾಜದ ಅಧಃಪತನಕ್ಕೆ ಅಪರೋಕ್ಷವಾಗಿ ಕಾರಣರಾಗುತ್ತಿವೆ.      
ಭುಕ್ತಾಹಾರ ಜೀರ್ಣಿಸುವ ವೈಶ್ವಾನರ
ಕಂಡವರನು ಸುಡುವನು ಅಸೂಯಾಪರ|
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡೆ ಸಲ್ಲಾಪ ಮೂಢ|| 
[ಟಿಪ್ಪಣಿ: ವೈಶ್ವಾನರ ಎಂದರೆ ಉದರದಲ್ಲಿರುವ, ತಿಂದ ಆಹಾರವನ್ನು ಜೀರ್ಣಿಸಲು ಸಹಕಾರಿಯಾಗುವ ಅಗ್ನಿ.]
     ಮೊದಲೇ ಹೇಳಿರುವಂತೆ ಕೋಪಿಷ್ಠರೊಡನೆ ಏಗಬಹುದು, ಮೂರ್ಖರೊಡನೆ ಸ್ನೇಹ ಮಾಡಬಹುದು, ಸಂಕೋಚ ಸ್ವಭಾವದವರೊಡನೆ ಮೌನವಾಗಿರಬಹುದು, ಆದರೆ ಮತ್ಸರಿಸುವವರ ಜೊತೆ ಬಾಂಧವ್ಯ ಹೊಂದಿರುವುದು, ಸರಸ ಸಂಭಾಷಣೆಗಳನ್ನು ಮಾಡುವುದೂ ಸಹ ಅಪಾಯಕಾರಿಯೇ ಎಂಬುದು ಅನುಭವಿಗಳ ಮಾತು. ಏಕೆಂದರೆ ಮೇಲೆ ಕಾಣುವಂತೆ, ತೋರಿಸಿಕೊಳ್ಳುವಂತೆ ಅವರು ಇರುವುದೇ ಇಲ್ಲ. ಒಳಗಿರುವ ವಿಷಸರ್ಪ ಯಾವಾಗ ಕಚ್ಚಲಿ ಎಂದು ಒಳಗೊಳಗೇ ಬುಸುಗುಡುತ್ತಿರುತ್ತದೆ. ಮತ್ಸರದಲ್ಲಿ ಪ್ರೀತಿ ಇರುತ್ತದೆ, ಆದರೆ ಅದು ಅವರಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರೀತಿ ನಿಜವಾಗಿ ಕುರುಡಲ್ಲ, ಮತ್ಸರ ಕುರುಡಾಗಿರುತ್ತದೆ. ಅದು ವಾಸ್ತವತೆಯನ್ನು ಕಾಣಲು, ಅರಿಯಲು ಇಚ್ಚಿಸುವುದೇ ಇಲ್ಲ. ಇತರರ ಕೆಡುಕಿಗಾಗಿ ಹಂಬಲಿಸುವ ಅದು ಮುಂದೊಮ್ಮೆ ತಿರುಗುಬಾಣವಾಗಿ ಬರುತ್ತದೆಂಬ ಅರಿವು ಅದಕ್ಕಿರುವುದಿಲ್ಲ. ಮತ್ಸರವೆಂದರೆ ಮತ್ತೇನೂ ಅಲ್ಲ, ನಗುವ ಶತ್ರುಗಳ ನಡುವೆ ಏಕಾಂಗಿಯಾಗಿರುವಂತೆ ಭಾಸವಾಗುವುದೇ ಮತ್ಸರ.
     ಆಳವಾಗಿ ಚಿಂತಿಸಿದರೆ ಅರ್ಥವಾಗುತ್ತದೆ. ಮತ್ಸರ ಕೀಳರಿಮೆಯಿಂದ ನರಳುವವರ ಕಾಯಿಲೆಯೇ ಸರಿ. ಅದು ತನ್ನನ್ನು ತಾನು ಸರಿಯಾಗಿ ಅರಿಯದೇ ಬೇರೆಯವರು ಹೆಚ್ಚು ಮುಂದಿದ್ದಾರೆ ಎಂಬುದಕ್ಕೆ ಸಾಕ್ಷಿಗಳನ್ನು ಅರಸುವಂತೆ ಮಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಮೊದಲು ನಮ್ಮನ್ನು ನಾವು ಇಷ್ಟಪಡುವುದನ್ನು ಕಲಿಯುವುದು. ನಮ್ಮನ್ನು ನಾವೇ ಇಷ್ಟಪಡದಿದ್ದರೆ ಬೇರೆಯವರು ಇಷ್ಟಪಡಬೇಕೆಂದು ಹೇಗೆ ಬಯಸುವುದು? ಇತರರನ್ನು ನಮ್ಮನ್ನು ಅಳೆಯುವ ಅಳತೆಗೋಲನ್ನಾಗಿಸುವ ಮನೋಭಾವವನ್ನು ಮೊದಲು ಬಿಡಬೇಕು. ಇತರರ ಮೇಲೆ ಪರಿಶೋಧನೆಯ ದೃಷ್ಟಿ ಬೀರುವುದನ್ನು ನಿಲ್ಲಿಸಿ ನಮ್ಮೊಳಗೆ ನಾವು ಕಣ್ಣು ಹಾಯಿಸಿಕೊಳ್ಳಬೇಕು. ಮತ್ಸರದ ಬೀಜಗಳು, ಮೊಳಕೆಗಳನ್ನು, ಕಳೆಗಳನ್ನು ಮೊದಲು ಒಳಗಿಂದ ತೆಗೆದುಬಿಡಬೇಕು. ನಂತರ ನಮ್ಮ ಶಕ್ತಿಯನ್ನು ಸ್ವಂತದ ಬೆಳವಣಿಗೆ, ಪ್ರಗತಿಯ ಕಡೆಗೆ ವಿನಿಯೋಗಿಸಬೇಕು. ಆಗ ನಾವು ಇತರರು ನಮ್ಮ ಬಗ್ಗೆ ಮತ್ಸರ ಪಡುವಂತಹವರಾಗುತ್ತೇವೆ, ಅರ್ಥಾತ್ ನಾವು ಬೆಳೆಯುತ್ತಾ ಹೋಗುತ್ತೇವೆ. ಕಬ್ಬಿಣವನ್ನು ತುಕ್ಕು ತಿಂದು ಹಾಕುವಂತೆ ಮತ್ಸರ ನಮ್ಮ ಬೆಳವಣಿಗೆಯನ್ನು ತಿನ್ನುತ್ತಿತ್ತೆಂಬ ಅರಿವು ಬರುವುದು ಆಗಲೇ. ಒಂದು ಮಾತನ್ನು ನೆನಪಿಡಬೇಕು, ನಾವು ಯಾರ ಬಗ್ಗೆ ಮತ್ಸರಿಸುತ್ತೇವೆಯೋ ಅವರನ್ನು ದೊಡ್ಡವರೆಂದು ಒಪ್ಪಿಕೊಂಡಂತೆ ಆಗುತ್ತದೆ. ಎತ್ತರವಾಗಿರುವ ಮರವನ್ನು, ಪರ್ವತಗಳನ್ನು ಬಿರುಗಾಳಿ ಬಾಧಿಸುತ್ತದೆ ಅಲ್ಲವೇ? 
     ಒಟ್ಟಾರೆಯಾಗಿ ಹೇಳಬೇಕೆಂದರೆ ಮತ್ಸರವೆಂಬುದು ನಮ್ಮ ಒಳಗಿನ ಕಲ್ಮಶ. ಅದನ್ನು ನಿವಾರಿಸಿಕೊಂಡರೆ ನಾವು ಮುಂದೆ ಸಾಗುತ್ತೇವೆ. ಇಲ್ಲದಿದ್ದರೆ ಕೆಳಕ್ಕೆ ಜಾರುತ್ತೇವೆ. ವೇದದ ಈ ಕರೆ ನಮ್ಮನ್ನು ಎಚ್ಚರಿಸಲಿ:
ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪)
ಅರ್ಥ: "ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ."
-ಕ.ವೆಂ.ನಾಗರಾಜ್.
**************
14.7.2014ರ ಜನಮಿತ್ರದ 'ಚಿಂತನ' ಅಂಕಣದಲ್ಲಿ ಪ್ರಕಟಿತ.





2 ಕಾಮೆಂಟ್‌ಗಳು:

  1. [ಏತೇ ಅಸ್ಯಗ್ರಮಾಶವೋsತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್.೯.೬೩.೪)
    ಅರ್ಥ: "ಕ್ರಿಯಾಶಾಲಿಗಳು, ನಿಷ್ಕಲ್ಮಶಚರಿತ್ರರಾದವರು, ತಪ್ಪು-ಸರಿಗಳನ್ನು ವಿವೇಚಿಸಿ ನಡೆಯುವವರು ಧರ್ಮಜೀವನ ಪ್ರವಾಹದಲ್ಲಿ ಕುಟಿಲತನದ, ಕೊಂಕುನಡೆಯ, ವಕ್ರವ್ಯವಹಾರಗಳನ್ನೆಲ್ಲಾ ದಾಟಿ ಮುನ್ನಡೆಯುತ್ತಾರೆ." ] ತುಂಬಾ ಮೆಚ್ಚಿಗೆಯಾದದ್ದು

    ಪ್ರತ್ಯುತ್ತರಅಳಿಸಿ