ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮೇ 7, 2014

ನಕಾರಾತ್ಮಕ ಶಕ್ತಿ ವಿಜೃಂಭಿಸುವುದೇಕೆ?

     ಬಸ್ಸಿನಲ್ಲಿ ನಿಂತಿದ್ದ ವೃದ್ಧರೊಬ್ಬರ ಕಾಲು ತುಳಿದುಕೊಂಡೇ ಹೋದವನನ್ನು ಕುರಿತು, 'ಏಯ್, ಕಣ್ಣು ಕಾಣಿಸುವುದಿಲ್ಲವಾ? ನೋಡಿಕೊಂಡು ಹೋಗಬಾರದಾ?' ಎಂದು ಆ ವೃದ್ಧರು ನೋವಿನಿಂದ ನರಳುತ್ತ ಕಿರುಚಿದರು. ತಿರುಗಿ ನಿಂತ ಆ ಧಡಿಯ ಕೆಂಗಣ್ಣು ಬಿಡುತ್ತಾ ಆ ವೃದ್ಧರ ಕೆನ್ನೆಗೆ ಬಾರಿಸಿದ. ಅವರು ಅನಿರೀಕ್ಷಿತವಾದ ಈ ಪೆಟ್ಟಿನಿಂದ ತಲ್ಲಣಿಸಿ ಕೈಲಿದ್ದ ಚೀಲವನ್ನೂ ಬೀಳಿಸಿಕೊಂಡು ಕುಸಿದು ಕುಳಿತಿದ್ದರು. ಬಸ್ಸಿನಲ್ಲಿ ಜನ ತುಂಬಿದ್ದರೂ ಒಬ್ಬರೂ ಆ ಧಡಿಯನ ವಿರುದ್ಧ ದ್ವನಿ ಎತ್ತಲಿಲ್ಲ. ತಮಗೆ ಸಂಬಂಧವಿಲ್ಲವೆಂಬಂತೆ ಎತ್ತಲೋ ನೋಡುತ್ತಾ ಇದ್ದುಬಿಟ್ಟರು. ಆ ಧಡಿಯನಷ್ಟೇ ಬಲಶಾಲಿಗಳಾಗಿ ತೋರುತ್ತಿದ್ದ ಒಬ್ಬಿಬ್ಬರು ಬಸ್ಸಿನಲ್ಲಿ ಇದ್ದರೂ ಅವರೂ ಸುಮ್ಮನಿದ್ದರು. ಏಕೆ ಹೀಗೆ? ಹಿಂದೊಮ್ಮೆ ಕೊಲೆ ಮೊಕದ್ದಮೆ ಎದುರಿಸುತ್ತಿದ್ದ ರೌಡಿಯೊಬ್ಬ ನಗರಸಭೆಗೆ ಚುನಾವಣೆ ನಡೆದಾಗ ಮಚ್ಚು ಹಿಡಿದುಕೊಂಡು ಹಿಂದಿನ ದಿನ ಎಲ್ಲಾ ಮತದಾರರ ಮನೆಗಳಿಗೆ ಹೋಗಿ ಮತ ಕೇಳಿದ್ದ. ಆತ ಚುನಾವಣೆಯಲ್ಲಿ ಗೆದ್ದಿದ್ದೂ ಅಲ್ಲದೆ ಮುಂದೆ ನಗರಸಭೆಯ ಅಧ್ಯಕ್ಷನೂ ಆಗಿ ಆಯ್ಕೆಯಾದ! ಆಯ್ಕೆಯಾದ ಅನ್ನುವುದಕ್ಕಿಂತ ಆಯ್ಕೆ ಮಾಡಬೇಕಾಯಿತು ಅನ್ನುವುದು ಹೆಚ್ಚು ಸೂಕ್ತ. ಕಾಲಾನಂತರದಲ್ಲಿ ಕೊಲೆಯಾಗುವ ಮೂಲಕ ಅಂತ್ಯ ಕಂಡಿದ್ದ ಅನ್ನಿ. ಇಂತಹ ಘಟನೆಗಳು ಬಿಂಬಿಸುವುದಾದರೂ ಏನು? ದುಷ್ಟ ಶಕ್ತಿಗಳಿಗೆ ಪ್ರತಿರೋಧ ತೋರುವ ಮನೋಭಾವದ ಕೊರತೆ, ದುಷ್ಟತನವನ್ನು ಒಪ್ಪದ ಸಜ್ಜನರೆನಿಸಿಕೊಂಡವರು ಬಹಳ ಸಂಖ್ಯೆಯಲ್ಲಿದ್ದರೂ ಅವರು ಸಂಘಟಿತರಾಗದಿರುವುದು ಮತ್ತು ನಮಗೇಕೆ ಎಂಬ ಮನೋಭಾವ ದುಷ್ಟತನದ ಗೆಲುವಿಗೆ ಕಾರಣವಾಗುತ್ತಿದೆ.
     ಈ ಪ್ರಪಂಚ ನಕಾರಾತ್ಮಕ ಮತ್ತು ಸಕಾರಾತ್ಮಕ ಗುಣಗಳ ಮಿಶ್ರಣವಾಗಿದೆ. ಒಂದು ಇನ್ನೊಂದರ ಮೇಲೆ ಸವಾರಿ ಮಾಡಲು ಪ್ರಯತ್ನ ಮಾಡುತ್ತಲೇ ಇರುತ್ತದೆ ಮತ್ತು ಗೆಲ್ಲಲು ಏನೆಲ್ಲವನ್ನೂ ಮಾಡುತ್ತವೆ. ವಿಶೇಷವೆಂದರೆ ಯಾವುದೇ ಒಂದು ಪೂರ್ಣ ಗೆಲುವನ್ನು ಪಡೆಯಲಾರದು; ಗೆದ್ದರೂ ಅದು ತಾತ್ಕಾಲಿಕ ಗೆಲುವಾಗಿರುತ್ತದೆ. ಯಾವುದು ಸಮಾಜಕ್ಕೆ, ಪರಿಸರಕ್ಕೆ, ಇತರ ಜೀವಿಗಳಿಗೆ ಹಿತಕರವಾಗಿರುತ್ತದೋ ಅದನ್ನು ಸಕಾರಾತ್ಮಕ ಗುಣವೆನ್ನಬಹುದಾದರೆ, ಇದಕ್ಕೆ ತದ್ವಿರುದ್ಧವಾದುದು ನಕಾರಾತ್ಮಕ ಗುಣ. ಮನುಷ್ಯನಿಗೂ ಮತ್ತು ಇತರ ಪ್ರಾಣಿಗಳಿಗೂ, ಕ್ರಿಮಿ-ಕೀಟಗಳಿಗೂ, ಒಟ್ಟಾರೆ ಇತರ ಜೀವಿಗಳಿಗೂ ಇರುವ ವಿಶೇಷ ವ್ಯತ್ಯಾಸವೆಂದು ಗುರುತಿಸಬಹುದಾದುದೆಂದರೆ, ಅದು ಮನುಷ್ಯನಿಗೆ ಇರುವ ವಿವೇಚನೆ ಮಾಡುವ ಶಕ್ತಿ. ಆತ ತನ್ನ ವಿವೇಕದಿಂದ ಸಕಾರಾತ್ಮಕವಾದುದು ಯಾವುದು, ನಕಾರಾತ್ಮಕವಾದುದು ಯಾವುದು ಎಂದು ಗುರುತಿಸಬಲ್ಲ. ಆತನ ಇಚ್ಛಾಶಕ್ತಿ ಅನುಸರಿಸಿ ಆತ ಸಕಾರಾತ್ಮಕವಾಗಿರುತ್ತಾನೋ ಅಥವ ಅದಕ್ಕೆ ವಿರುದ್ಧವಾಗಿ ನಡೆಯುತ್ತಾನೋ ಎಂಬುದು ಅವಲಂಬಿಸಿರುತ್ತದೆ. ಒಬ್ಬ ಮನುಷ್ಯ ಸಕಾರಾತ್ಮಕವಾಗಿ ಯೋಚಿಸುವವನಾದರೆ ಸಕಾರಾತ್ಮಕ ಶಕ್ತಿ ಅವನನ್ನು ಬೆಂಬಲಿಸುತ್ತದೆ ಮತ್ತು ನಕಾರಾತ್ಮಕವಾಗಿ ಯೋಚಿಸಿದರೆ ಅವನ ಬೆಂಬಲಕ್ಕೆ ನಕಾರಾತ್ಮಕ ಶಕ್ತಿ ಇರುತ್ತದೆ. ಎಷ್ಟು ಜನರು ಇದನ್ನು ಬೆಂಬಲಿಸುತ್ತಾರೆ ಎಂಬುದರ ಮೇಲೆ ಇವುಗಳ ಗೆಲುವು ನಿರ್ಧರಿತವಾಗುತ್ತದೆ. ಕೆಲವೇ ದುಷ್ಟರು ಇದ್ದರೂ ಅವರು ಬಹಳಷ್ಟು ಸಜ್ಜನರ ಮೇಲೆ ಸವಾರಿ ಮಾಡುವುದು ಹೇಗೆ ಸಾಧ್ಯವಾಗುತ್ತದೆಂದರೆ, ಸಜ್ಜನರು ಒಟ್ಟಾಗಿ ಸಕಾರಾತ್ಮಕವಾಗಿ ಸ್ಪಂದಿಸದಿರುವುದೇ ಇದಕ್ಕೆ ಕಾರಣ. ತಮ್ಮ ಮಾತೇ ನಡೆಯಬೇಕು, ತಮ್ಮ ಮಾತಿಗೆ ಬೆಲೆ ಬರಬೇಕು ಎಂಬ ಕಾರಣಕ್ಕಾಗಿಯೇ ಇಂದು ಕ್ರಿಶ್ಚಿಯನರು ಮತ್ತು ಮುಸ್ಲಿಮರು ಮತಾಂತರದ ಮೂಲಕ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದರ ಮೂಲ ಕಾರಣ. ಒಟ್ಟಾರೆಯಾಗಿ ಸಮಾನ ವಿಚಾರಗಳು, ಭಾವನೆಗಳ ಜನಸಮೂಹ ಇಚ್ಛಿತ ಗುರಿಯನ್ನು ತಲುಪಬಲ್ಲದು.
     ಈ ಪ್ರಪಂಚದಲ್ಲಿನ ಬಹುತೇಕ ಸಮಸ್ಯೆಗಳಿಗೆ ಕಾರಣ ನಕಾರಾತ್ಮಕ ಶಕ್ತಿ ಮತ್ತು ನಕಾರಾತ್ಮಕ ವಿಚಾರಗಳೇ ಆಗಿವೆ. ನಕಾರಾತ್ಮಕ ಕಾರಣಗಳಿಂದಾಗಿ ಸಮಾಜದಲ್ಲಿ, ಸಂಸಾರಗಳಲ್ಲಿ ಸಮಸ್ಯೆಗಳು ಉದ್ಭವವಾಗುತ್ತವೆ. ನಕಾರಾತ್ಮಕವಾಗಿ ಯೋಚಿಸುವವರು ತಮ್ಮ ವಿವೇಚನಾಶಕ್ತಿಯನ್ನು ಸರಿಯಾಗಿ ಬಳಸುವುದಿಲ್ಲ. ಯಾವುದೇ ಸಂಗತಿಯನ್ನು ಒಪ್ಪುವುದಕ್ಕೆ ಮುನ್ನ ಅದರ ಕುರಿತು ಚಿಂತಿಸಿ, ಅರ್ಥ ಮಾಡಿಕೊಂಡು, ಚರ್ಚಿಸಿದ ನಂತರ ಅಂತರಂಗಕ್ಕೆ ಒಪ್ಪಿತವಾಗಬೇಕು ಎಂದು ವಿವೇಕ ಹೇಳುತ್ತದೆ. ಅದು ಸರಿಯಿರಲಿ, ಬಿಡಲಿ, ನಮ್ಮ ಧರ್ಮದಲ್ಲಿ ಈರೀತಿ ಇದೆ, ನಮ್ಮ ಪುರಾಣದಲ್ಲಿ ಹಾಗೆ ಹೇಳಿದೆ, ಹೀಗೆ ಹೇಳಿದೆ, ಅದನ್ನು ಕಣ್ಣು ಮುಚ್ಚಿ ಅನುಸರಿಸಬೇಕು ಎಂದು ಹೇಳುವುದಾದರೆ ವೈಚಾರಿಕತೆಗೆ ಅಡ್ಡಿಪಡಿಸಿದಂತಾಗುತ್ತದೆ. ಅದು ವೇದವಿರಲಿ, ಉಪನಿಷತ್ತಿರಲಿ, ಬೈಬಲ್ ಇರಲಿ, ಕುರಾನ್ ಇರಲಿ, ಇಂತಹ ಏನೇ ಇರಲಿ, ಅವುಗಳಲ್ಲಿನ ವಿಚಾರಗಳು ಮುಕ್ತ ವಿಮರ್ಶೆಗೆ ಒಳಪಡಬೇಕು. ಆಗ ಮಾತ್ರ ಅವು ಪುಟವಿಟ್ಟ ಚಿನ್ನದಂತೆ ಬೆಳಗುವುವು. ಸತ್ಯ ವಿಚಾರಗಳು ಎಲ್ಲಿಂದಲಾದರೂ ಬರಲಿ ಅವನ್ನು ಮುಕ್ತವಾಗಿ ಸ್ವಾಗತಿಸಬೇಕು ಅನ್ನುವುದು ಸಕಾರಾತ್ಮಕ ಗುಣವಾಗುತ್ತದೆ. ಸರಿಯೋ, ತಪ್ಪೋ ಅದನ್ನು ಪ್ರಶ್ನಿಸಬಾರದು, ಕಣ್ಣು ಮುಚ್ಚಿ ಒಪ್ಪಬೇಕು ಅನ್ನುವುದು ಸಕಾರಾತ್ಮಕ ಧೋರಣೆ ಎನಿಸದು. ಋಗ್ವೇದದ ಈ ಸಾಲು ಮನುಕುಲಕ್ಕೆ ಮಾರ್ಗದರ್ಶಿಯಾಗಿದೆ:
ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || (ಋಕ್.೧.೮೬.೯.)
     ಇದರ ಅರ್ಥ ಹೀಗಿದೆ: 'ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ, ನೀವು ನಿಮ್ಮ ಸ್ವಂತ ಶಕ್ತಿಯಿಂದ ಸತ್ಯವನ್ನು ಆವಿಷ್ಕರಿಸಿರಿ, ಹೊರತನ್ನಿರಿ. ಕೆಟ್ಟ ವಿಚಾರಗಳನ್ನು ನಿಮ್ಮ ಜ್ಞಾನದ ಬಲದಿಂದ, ನಿಮ್ಮ ವೈಚಾರಿಕ ಶಕ್ತಿಯಿಂದ ದಮನ ಮಾಡಿರಿ.' ನಮ್ಮಲ್ಲಿ ಅಜ್ಞಾನವಿರುವವರೆಗೆ ನಮ್ಮಲ್ಲಿನ ಕೆಟ್ಟ ಗುಣಗಳು ನಾಶವಾಗಲಾರವು. ಮುಂದಿನ ಮಂತ್ರದಲ್ಲಿ ಈ ವಿಚಾರ ಮತ್ತಷ್ಟು ಸ್ಪಷ್ಟಪಡಿಸಲಾಗಿದೆ:
ಗೂಹತಾ ಗುಹ್ಯಂ ತಮೋ ವಿ ಯಾತ ವಿಶ್ವಮತ್ರಿಣಮ್ | ಜ್ಯೋತಿಷ್ಕರ್ತಾ ಯದುಶ್ಮಸಿ || (ಋಕ್.೧.೮೬.೧೦.)
     'ನಮ್ಮಲ್ಲಿರುವ ಆಂತರಿಕ ಕತ್ತಲೆಯನ್ನು, ಅಂದರೆ ಅಜ್ಞಾನವನ್ನು ಹೋಗಲಾಡಿಸಬೇಕು. ನಮ್ಮನ್ನು ನಾಶ ಮಾಡುವ ಎಲ್ಲಾ ದುರ್ಗುಣಗಳನ್ನು ದೂರೀಕರಿಸಬೇಕು. ಯಾವ ನೈಜ ಜ್ಞಾನವನ್ನು ಬಯಸುತ್ತೇವೆಯೋ ಆ ಜ್ಞಾನಜ್ಯೋತಿಯನ್ನು ಬೆಳಗಿಸಬೇಕು' ಎನ್ನುವ ಈ ಕರೆ ಅದೆಷ್ಟು ಆಪ್ಯಾಯಮಾನವಾಗಿದೆ! ಕಣ್ಣು ಮುಚ್ಚಿ ಅಂಧ ಮತ್ತು ಆರ್ಥರಹಿತ ಸಂಪ್ರದಾಯಗಳನ್ನು ಆಚರಿಸುವ ಬದಲು, ಹೃದಯಾಂತರಾಳದಿಂದ ವಿಚಾರ ಮಾಡಿ ಮನುಕುಲಕ್ಕೆ ಹಿತವಾದ ಒಳ್ಳೆಯ ಗುಣಗಳನ್ನು ಪ್ರಚೋದಿಸುವ ಕಾರ್ಯಗಳನ್ನು ಮಾಡಬೇಕೆಂಬ ಮನಸ್ಸನ್ನು ವೈಚಾರಿಕರು ಮಾಡಬೇಕಿದೆ.
     ಇಂದು ವಿಶ್ವವನ್ನು ಕಾಡುತ್ತಿರುವ ಮತೀಯ ಭಯೋತ್ಪಾದನೆಗಳು ನಕಾರಾತ್ಮಕ ವಿಚಾರಧಾರೆಯ ಫಲವಾಗಿದೆ. ಬಾಂಬುಗಳನ್ನು ಹಾಕಿ ಅಮಾಯಕರನ್ನು ಕೊಲ್ಲುವುದು, ಇತರ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವುದು, ಹಿಂಸಿಸುವುದು, ಅತ್ಯಾಚಾರವೆಸಗುವುದರಿಂದ ತಾವು ನಂಬಿದ ಧರ್ಮ/ಮತ/ವಿಚಾರಕ್ಕೆ ಪುಷ್ಟಿ ಸಿಗುತ್ತದೆ ಎಂದು ನಂಬುವ ಅವರ ಮನೋಭಾವ ಸರಿಯಾದುದೆಂದು ವೈಚಾರಿಕ ಪ್ರಜ್ಞೆಯುಳ್ಳ, ಪೂರ್ವಾಗ್ರಹಪೀಡಿತರಲ್ಲದ ಯಾರೇ ತಿಳಿದವರು ಹೇಳಲಾರರು. ಇಂತಹ ಹುಚ್ಚಾಟಗಳು ನಿಲ್ಲದೆ ವಿಶ್ವದಲ್ಲಿ ಮನುಷ್ಯ ಶಾಂತಿಯಿಂದ ಬಾಳಲಾರ. ಅವರನ್ನು ಸರಿದಾರಿಗೆ ತರಬೇಕೆಂದರೆ ಸದ್ವಿಚಾರಗಳನ್ನು ಸದ್ದಿಲ್ಲದೆ ತಮ್ಮ ತಮ್ಮೊಳಗೆ ಅಡಗಿಸಿಕೊಂಡಿರದೆ ಹೊರಬರಲು ಅವಕಾಶ ಕೊಡುವ ಮತ್ತು ಅಂತಹ ಕಿಡಿಗೇಡಿಗಳನ್ನು ಹದ್ದುಬಸ್ತಿನಲ್ಲಿಡುವ ಸಜ್ಜನಶಕ್ತಿ ಜಾಗೃತವಾಗುವ ಅವಶ್ಯಕತೆ ಇಂದು ಬಹಳವಾಗಿದೆ. ಎಲ್ಲಾ ಧರ್ಮಗಳ/ಮತಗಳ ಹಿರಿಯರೆನಿಸಿಕೊಂಡವರು ಈ ಸಜ್ಜನಶಕ್ತಿಯ ಜಾಗರಣದಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು. ಹೆಚ್ಚಿನವರು ಶಾಂತಿಪ್ರಿಯರು.  ಆದರೆ ಅವರಲ್ಲಿನ ಸಜ್ಜನಿಕೆ ಪ್ರಕಟವಾಗಬೇಕಷ್ಟೆ! ಆಗ ಮಾತ್ರ ಇಂತಹ ಕುಕೃತ್ಯಗಳು ನಿಲ್ಲುವುವು. 
     ಲೇಖನದ ಪ್ರಾರಂಭದಲ್ಲಿ ಹೇಳಿದ ಘಟನೆಗೆ ಈಗ ಮತ್ತೆ ಹಿಂತಿರುಗೋಣ. ವೃದ್ಧರಿಗೆ ಹೊಡೆದ ಆ ಧಡಿಯನ ವಿರುದ್ಧ ಯಾರಾದರೂ ತಿರುಗಿಬಿದ್ದು, ಅವರ ಬೆಂಬಲಕ್ಕೆ ಇತರರೂ ನಿಂತು ಆ ಧಡಿಯನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು ಮತ್ತು ವೃದ್ಧರನ್ನು ಸಂತೈಸಿದರು ಎಂದಿಟ್ಟುಕೊಳ್ಳೋಣ. ಆಗ ಪರಿಣಾಮವೇನಾಗುತ್ತದೆ? ವೃದ್ಧರಿಗೆ ಸಮಾಧಾನವಾಗುತ್ತದೆ. ಆ ಧಡಿಯನಿಗೆ ಮತ್ತೊಮ್ಮೆ ಆ ರೀತಿ ವರ್ತಿಸುವ ಧೈರ್ಯ ಬರುವುದಿಲ್ಲ, ಅಲ್ಲವೇ? ಸಮಾಜದ ಹಿತಕ್ಕೆ ಧಕ್ಕೆ ತರುವಂತಹ ನಕಾರಾತ್ಮಕ ವಿಚಾರಗಳನ್ನು ನಿಯಂತ್ರಿಸಿ, ಸಕಾರಾತ್ಮಕ ವಿಚಾರಗಳಿಗೆ ಪ್ರೋತ್ಸಾಹ ಸಿಗಬೇಕೆಂದರೆ ಸಕಾರಾತ್ಮಕ ಗುಣ ಬೆಳೆಸುವಂತಹ ಅಂಶಗಳಿಗೆ ನೀರೆರೆಯಬೇಕು. ಅಂತಹ ಅಂಶಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದೆನಿಸುತ್ತದೆ:
೧. ಸುಯೋಗ್ಯ ಸಂಸ್ಕಾರ ನೀಡುವಂತಹ ಶಿಕ್ಷಣ ಪದ್ಧತಿ,
೨. ಉತ್ತಮ ವಿಚಾರಗಳಿಗೆ ಪ್ರೋತ್ಸಾಹ, ಮನನ, ಮಂಥನ,
೩. ಸತ್ಸಂಗಗಳಲ್ಲಿ ಪಾಲುಗೊಳ್ಳುವಿಕೆ,
೪. ದುರ್ಜನರಿಂದ, ದುಷ್ಟ ವಿಚಾರಗಳಿಂದ ದೂರವಿರುವುದು,
೫. ಅಸತ್ಯ, ಅನ್ಯಾಯಗಳಿಗೆ ತಲೆಬಾಗದಿರುವುದು, ಅವುಗಳ ವಿರುದ್ಧ ದ್ವನಿ ಎತ್ತುವುದು ಮತ್ತು ಹಾಗೆ ಮಾಡುವವರನ್ನು ಬೆಂಬಲಿಸುವುದು,
೬. ಭ್ರಷ್ಠಾಚಾರ, ಸ್ವಜನಪಕ್ಷಪಾತ, ಭಯೋತ್ಪಾದನೆ, ಮುಂತಾದ ಅನಿಷ್ಟಗಳ ವಿರುದ್ಧ ಜಾಗೃತರಾಗುವುದು ಮತ್ತು ಅಂತಹ ಪಿಡುಗುಗಳ ವಿರುದ್ಧದ ಹೋರಾಟಗಳಲ್ಲಿ ಸಕಿಯರಾಗಿ ಪಾಲುಗೊಳ್ಳುವುದು,
೭. ಯಾವುದೇ ಕೆಲಸ ಮಾಡುವ ಮುನ್ನ ಅದು ಸರಿಯಾಗಿದೆಯೇ ಎಂದು ಯೋಚಿಸಿ ನಂತರ ಆ ಕೆಲಸ ಮಾಡುವುದು,
೮. ಮಾಧ್ಯಮಗಳಲ್ಲಿ ನಕಾರಾತ್ಮಕ ವಿಷಯಗಳಿಗೆ ಈಗ ಸಿಗುತ್ತಿರುವ ಪ್ರೋತ್ಸಾಹವನ್ನು ನಿಯಂತ್ರಿಸುವುದು, ಇತ್ಯಾದಿ. 
     ಈ ಪಟ್ಟಿಯನ್ನು ನಮ್ಮ ನಮ್ಮ ವಿವೇಚನಾನುಸಾರ ಬೆಳೆಸುತ್ತಾ ಹೋಗಬಹುದು.
     ಒಂದಂತೂ ಸಮಾಧಾನಕರ ವಿಷಯವಿದೆ. ಅದೇನೆಂದರೆ ಯಾವೊಬ್ಬ ಮನುಷ್ಯನೂ ಪೂರ್ತಿ ಕೆಟ್ಟವನೂ ಅಲ್ಲ, ಒಳ್ಳೆಯವನೂ ಅಲ್ಲ. ಒಳ್ಳೆಯವರಾಗಲು, ಬದಲಾಗಲು ಎಲ್ಲರಿಗೂ ಅವಕಾಶವಿದೆ. ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಸಜ್ಜನಶಕ್ತಿ ಬೆಳೆಸುವುದು ಕಷ್ಟವೇನಲ್ಲ. ಸಕಾರಾತ್ಮಕ ಶಕ್ತಿ ಬೆಳೆದಷ್ಟೂ, ನಕಾರಾತ್ಮಕ ಶಕ್ತಿಯ ಬಲ ಕುಸಿಯುತ್ತದೆ. ಕಪ್ಪು ಮೋಡಗಳು ಚದುರಿದಾಗ ಸೂರ್ಯನ ಬೆಳಕು ತಾನಾಗಿ ಹೊಮ್ಮುವಂತೆ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಮೂಡುತ್ತದೆ. ನಕಾರಾತ್ಮಕ ವಿಚಾರಧಾರೆ ಜೀವನ ಎಷ್ಟು ಕೆಟ್ಟದಾಗಿದೆಯೆಂದು ಬಿಂಬಿಸುತ್ತದೆ. ಸಕಾರಾತ್ಮಕ ವಿಚಾರಧಾರೆ ಕೆಟ್ಟಿರುವ ಜೀವನವನ್ನು ಹೇಗೆ ಸರಿಪಡಿಸಬೇಕೆಂದು ಚಿಂತಿಸುತ್ತದೆ. ಭವಿಷ್ಯವೆನ್ನುವುದು ನಾವು ಯಾವ ರೀತಿ ಚಿಂತಿಸುತ್ತೇವೆ, ನಿರ್ಧರಿಸುತ್ತೇವೆ ಮತ್ತು ಕಾರ್ಯಪ್ರವೃತ್ತರಾಗುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಧನಾತ್ಮಕ ಚಿಂತನೆ ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತದೆ. ಅಜ್ಞಾತ ಕವಿಯ ಈ ಕರೆಗೆ ಮನುಕುಲ ಓಗೊಟ್ಟರೆ ಬಹಳಷ್ಟು ಸಮಸ್ಯೆಗಳು ಹೇಳಹೆಸರಿಲ್ಲದಂತೆ ಓಡುತ್ತವೆ:
ನರರೆಲ್ಲ ಸರಿಸಮಾನ | ಎಂಬೀ ಪ್ರಬುದ್ಧ ಭಾವ |
ಉರದಲ್ಲಿ ಮೂಡುವಂತೆ | ಧೃತಿ ನೀಡು ಸತ್ಪ್ರಭಾವ ||
-ಕ.ವೆಂ.ನಾಗರಾಜ್.
**************
5.07.2014ರ 'ಜನಮಿತ್ರ'ದಲ್ಲಿ ಪ್ರಕಟಿತವಾಗಿದೆ.

4 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. naveengkn
      ಕವಿಗಳೇ, ಸಾಂಧರ್ಭಿಕ‌ ಬರಹ‌, ಇದು ಬರಿಯ‌ ಬರಹ‌ ಎನ್ನದೇ ಆ ದಿಟ್ಟಿನಲ್ಲಿ ಸಾಗುವ‌ ಆಲೊಚನೆ ಮಾಡಿದರೆ ಸ್ವಲ್ಪ‌ ಮಟ್ಟಿಗಾದರು ನೊಂದವರಿಗೆ ನೆಮ್ಮದಿ ಸಿಗುತ್ತದೆ ಎನ್ನುವುದು ಸತ್ಯ‌,,,,,,, ಹಾಗೆ ನೀವು ಹೇಳಿದ‌ ವಿದಾನಗಳು ಕೂಡ ಪಾಲಿಸಲು ಅರ್ಹ‌, ಆದರೂ,,,,,, ಅದನ್ನು ಹೇಗೆ, ಎಲ್ಲಿಂದ ಯಾರು ಪ್ರಾರಂಭಿಸಬೇಕು ಎನ್ನುವುದು ಗೊಜಲಾಗಿಯೆ ಉಳಿಯುತ್ತದೆ,,,,,,
      ಹರಿತ‌ ಉಗ್ರಗಾಮಿಗಳಿಗಾಗಿ ಉಳಿದವರೂ ಉಗ್ರಗಾಮಿಗಳಾಗಬೇಕೆ ಎಂದು ಕೆಲವರು ಪ್ರಶ್ನಿಸುತ್ತಾರೆ,,,,, ಮೂಕವಾಗಿದ್ದು ದೇವನೆಂಬುವವನು ಅವರನ್ನು ಶಿಕ್ಶಿಸುವ‌ವರೆಗೂ ಕಾಯವ‌ ಜನ ಇನ್ನೂ ಕೆಲವರಿದ್ದಾರೆ,,,,,,, ಏನಾದರು ಸಮಾಜಕ್ಕೆ ಕೊಡುಗೆ ಕೊಡಬೇಕೆಂದುಕೊಂಡ‌ ಯುವಕರನ್ನೂ ಕೂಡ ದೊಡ್ಡ‍ ದೊಡ್ಡ‌ ತತ್ವಗಳಿಂದ‌ ಇರಿದು ಕೊಲ್ಲುವ‌ ಇನ್ನೊಂದು ಯುವ‌ ಜನಾಂಗವೂ ಇದೇ,,,,,, ದೇಶ‌ ಬೇಡ‌, ಭಾಶೆ ಬೇಡ‌, ನಮ್ಮದೆನ್ನುವ‌ ಯಾವುದು ಬೇಡ‌ ಎಲ್ಲವೂ ಗುಂಪು ಉಗ್ರತೆ ಎಂದು ಬಿಂಬಿಸುವ‌ ಜನರೂ ಇದ್ದಾರೆ, ನನಗಂತೂ ಎಲ್ಲವೂ ಗೊಂದಲ‌ ಕವಿಗಳೇ,,,,,
      ನಿಮ್ಮ‌ ಬರಹದ‌ ಕಳಕಳಿಗೆ ನಾನು ಮನ‌ ಸೊತಿದ್ದೇನೆ, ಧನ್ಯವಾದಗಳು
      ನವೀನ್ ಜೀ ಕೇ

      kavinagaraj
      ಆತ್ಮೀಯ ನವೀನರೇ, ನಿಮ್ಮ ಕಳಕಳಿಯೇ ನಿಮ್ಮ ದಾರಿ ಸರಿಯೆಂದು ಹೇಳುತ್ತದೆ.
      ನನ್ನ 'ಮೂಢ ಉವಾಚ'ದ ಸಾಲುಗಳಿವು:

      ನೀ ಸರಿಯಾಗಿದ್ದರದುವೆ ಸಾಕು
      ಪರರ ಗೊಡವೆ ನಿನಗೇಕೆ ಬೇಕು?|
      ತಿದ್ದುವ ಹಂಬಲಕೆ ಕಡಿವಾಣ ಹಾಕು
      ಮನವನನುಗೊಳಿಸಿ ಶಾಂತನಿರು ಮೂಢ||

      ಪರರೆಂತಿರಬೇಕೆಂದು ಬಯಸುವುದು ನೀನು?
      ಅಂತಪ್ಪ ಮಾದರಿಯು ಮೊದಲಾಗು ನೀನು |
      ಬದಲಾಗು ನೀ ಮೊದಲು ಬದಲಾಗು ನೀನು
      ಬದಲಾಯಿಸುವ ಗುಟ್ಟು ಬದಲಾಗುವುದು ಮೂಢ||
      ಈ ಸಂದರ್ಭದಲ್ಲಿ ಸೂಕ್ತವೆಂದೆನಿಸಿ ಉಲ್ಲೇಖಿಸಿರುವೆ.
      ಮೆಚ್ಚುಗೆಗೆ ವಂದನೆಗಳು.

      ಅಳಿಸಿ
    2. naveengkn
      ಸೂಕ್ತ‌ ಸಾಲುಗಳಿಗೆ ನಮನಗಳು ಕವಿಗಳೇ,,,,,,, ಧನ್ಯವಾದಗಳು,,,,

      ಅಳಿಸಿ
  2. ಒಬ್ಬೊಬ್ಬರೇನೂ ಮಾಡಲಿಕ್ಕಾಗದು.. ಸ೦ಘದಲಿದ್ದುದಾದರೆ ಕಲಿಸಬಹುದು ಬುಧ್ಧಿ !
    ಹಿರಿಯರಾದರೇನ೦ತೆ.. ಕಿರಿಯರಿದ್ದರೇನ೦ತೆ..
    ನಮಸ್ಕರಿಸಿ, ಪ್ರಣಾಮಗಳ ಪಡೆಯಬೇಕೆ೦ದರು ಬಲ್ಲವರು..
    ಪರಸ್ಪರ ಸಗೌರವ-ಸಹಬಾಳ್ವೆ ಮನುಜ ಧರ್ಮದ ಮೇಲ್ಮೆಯಾಗಬೇಕೆ೦ದ ನಾ ನಾವಡ...
    ವಿಚಾರವಿಷ್ಟೇ.. ಕೆನ್ನೆಗೆ ಬಾರಿಸಿದವನೇನೂ ಅನಕ್ಷರಸ್ಥನಾಗಿರಲಿಕ್ಕಿಲ್ಲ... ಅಹ೦ಕಾರ,ಸ್ವಪ್ರತಿಷ್ಟೆ, ಏನೂ ಮಾಡಬಲ್ಲೆ ಎನ್ನುವ ದುರಾತ್ಮಶಕ್ತಿ ತು೦ಬಿಕೊ೦ಡವನಿರಬೇಕು.
    ಸಕಾಲಿಕ ಚಿ೦ತನಾತ್ಮಕ ಬರಹ.. ಕಾರ್ಯಸಾಧುವಾಗುವುದೂ ಅಷ್ಟೇ ಕಷ್ಟ!
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಪ್ರತ್ಯುತ್ತರಅಳಿಸಿ