ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಆಗಸ್ಟ್ 12, 2013

ಚತುರ್ವಿಧ ಪುರುಷಾರ್ಥಗಳು - ೧: ಧರ್ಮ ಮತ್ತು ಅರ್ಥ

     ವೇದ ಎಂಬ ಪದಕ್ಕೆ ಇರುವ ಯೌಗಿಕಾರ್ಥ 'ನಿಷ್ಕಳ ಜ್ಞಾನ' ಎಂಬುದು. ಜೀವರುಗಳ ಪೈಕಿ ವಿವೇಚನಾ ಶಕ್ತಿ ಹೊಂದಿರುವ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ಪರಮಾತ್ಮನ ಕೊಡುಗೆಯಾದ ಶರೀರ, ಮನಸ್ಸು, ಇಂದ್ರಿಯಗಳನ್ನು ಉಪಯೋಗಿಸಿಕೊಂಡು ಮಾನವ ಮೇಲೇರಲೂ ಬಲ್ಲ, ಕೆಳಕ್ಕೆ ಜಾರಲೂ ಬಲ್ಲ. ಬದುಕು ಸಾರ್ಥಕತೆ ಕಾಣಬೇಕಾದರೆ ನಾಲ್ಕು ಪುರುಷಾರ್ಥಗಳನ್ನು ಸಾಧಿಸಬೇಕೆಂದು ವೇದ ಹೇಳುತ್ತದೆ. ಋಗ್ವೇದದ ಈ ಮಂತ್ರ ಗಮನಿಸಿ:-
ಏಕಂ ಚಮಸಂ ಚತುರಃ ಕೃಣೋತನ ತದ್ ವೋ ದೇವಾ ಅಬ್ರುವನ್ ತದ್ ವ ಆಗಮಮ್ |
ಸೌಧನ್ವನಾ ಯದ್ಯೇವಾ ಕರಿಷ್ಯಥ ಸಾಕಂ ದೇವೈರ್ಯಜ್ಞಿಯಾಸೋ ಭವಿಷ್ಯಥ || (ಋಕ್.೧.೧೬೧.೨.)
     ಆತ್ಮನಿಗೆ ಬಡಿಸುವ ಜೀವನಸಾರವನ್ನು ನಾಲ್ಕಾಗಿ ವಿಂಗಡಿಸಿರಿ. ವಿದ್ವಾಂಸರುಗಳೂ ನಿಮಗೆ ಅದನ್ನೇ ಹೇಳುತ್ತಾರೆ. ಅದನ್ನೇ ತಂದಿದ್ದೇನೆ. ಹೀಗೆ ಮಾಡುವಿರಾದಲ್ಲಿ ದಿವ್ಯಗುಣ ವಿಶಿಷ್ಟರಾದ ವಿದ್ವಾಂಸರೊಂದಿಗೆ, ನೀವೂ ಆದರಣೀಯರಾಗುವಿರಿ ಎನ್ನುವ ಈ ಮಂತ್ರದಲ್ಲಿ ಉಲ್ಲೇಖಿಸಿರುವ ಅನುಸರಿಸಬೇಕಾದ, ಸಾಧಿಸಬೇಕಾದ ನಾಲ್ಕು ಜೀವನಸಾರಗಳೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಧರ್ಮ ಮತ್ತು ಅರ್ಥಗಳ ಕುರಿತು ಈ ಲೇಖನದಲ್ಲಿ ಚರ್ಚಿಸೋಣ.
ಧರ್ಮ:
     'ಧರ್ಮ'ವೆಂದರೆ ಯಾವುದಾದರೂ ಒಂದು ಸಮುದಾಯಕ್ಕೆ, ಒಂದು ಸಂಪ್ರದಾಯಕ್ಕೆ, ಒಂದು ರೀತಿ-ನೀತಿಗೆ ಅನ್ವಯವಾಗುವಂತಿರದೆ, ಸಮಸ್ತ ಮಾನವಕುಲಕ್ಕೆ ಅನ್ವಯವಾಗುವಂತಿರಬೇಕು. ಎಲ್ಲರ ಹಿತ ಕಾಯುವ, ಪಾಲಿಸುವ, ಪೋಷಿಸುವ ಉದಾತ್ತತೆ ಹೊಂದಿರಬೇಕು. ಆಧ್ಯಾತ್ಮಿಕವಾಗಿ ಮುಂದುವರೆಯಲು ಸುಯೋಗ್ಯ ಮಾರ್ಗದರ್ಶನ ನೀಡುವಂತಿರಬೇಕು. ಇವುಗಳಲ್ಲಿ ಯಾವುದಕ್ಕೆ ಲೋಪವಾಗುವುದಾದರೂ ಅದನ್ನು ಧರ್ಮ ಎಂದು ಹೇಳಲು ಬರುವುದಿಲ್ಲ. ಇಂತಹ ಧಾರಕ ಗುಣಗಳನ್ನು ಹೊಂದಿರುವುದೇ ಮಾನವ ಧರ್ಮ. ಇದನ್ನು ಸಾಧಿಸಲು ಆವಶ್ಯಕವಾಗಿರುವ ಜ್ಞಾನ, ಕರ್ಮ ಮತ್ತು ಉಪಾಸನೆಗಳೇ ಧರ್ಮದ ಅಭಿನ್ನ ಮತ್ತು ಅವಿಭಾಜ್ಯ ಅಂಗಗಳಾಗಿವೆ. 
ಪ್ರತ್ಯಾನ್ಮಾನಾದಧ್ಯಾ ಯೇ ಸಮಸ್ವರನ್ಶ್ಲೋಕಯಂತ್ರಾಸೋ ರಭಸಸ್ಯ ಮಂತವಃ |
ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತಃ || (ಋಕ್. ೯.೭೩.೬.)
     ಯಾರು ವೇದಜ್ಞಾನದ ಆಶ್ರಯದಲ್ಲಿ ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನವನ್ನು ಪಡೆದುಕೊಳ್ಳುತ್ತಾರೋ ಅವರು ವೇದಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ, ಪ್ರಭುವನ್ನು ತಿಳಿದವರೂ ಆಗುತ್ತಾರೆ. ಜ್ಞಾನದೃಷ್ಟಿಯಿಂದ ಕುರುಡರೂ ಕಿವುಡರೂ ಆದವರು ಋತದ (ಧರ್ಮದ) ಮಾರ್ಗವನ್ನು ತ್ಯಜಿಸುತ್ತಾರೆ. ದುಷ್ಕರ್ಮನಿರತರು ಪಾರುಗಾಣುವುದಿಲ್ಲ ಎಂಬುದು ಈ ಮಂತ್ರದ ಸಾರ. ವಿವೇಕಯುತವಾದ, ಧರ್ಮಪಾಲಕ ಜ್ಞಾನಿಗಳ ದೃಷ್ಟಿ ಹೇಗಿರುತ್ತದೆಂಬುದು ಈ ಕೆಳಗಿನ ಮಂತ್ರ ಹೇಳುತ್ತದೆ: 
ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ |
ವಿದ್ವಾನ್ ತ್ಸ ವಿಶ್ವಾ ಭುವನಾಭ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಅವ್ರತಾನ್ || (ಋಕ್. ೯.೭೩.೮.)
     ಋತದ (ಋತ=ಧರ್ಮ) ರಕ್ಷಕನು ಎಂದಿಗೂ ತುಳಿಯಲಡುವುದಿಲ್ಲ. ಉತ್ತಮ ವಿಚಾರಶೀಲನೂ, ಧರ್ಮಶೀಲನೂ ಆದವನು ತನ್ನ ಹೃದಯದಲ್ಲಿ ಮೂರು ಪವಿತ್ರ ತತ್ತ್ವಗಳನ್ನು ಸದಾ ಧರಿಸಿರುತ್ತಾನೆ. ಆ ಜ್ಞಾನಿಯು ಸಮಸ್ತ ಲೋಕಗಳನ್ನೂ ಎಲ್ಲೆಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. ಅಪ್ರಿಯರಾದ ವ್ರತರಹಿತರನ್ನು, ಪತನರೂಪದಲ್ಲಿ ಕೆಳಗೆ ಬಿದ್ದವರನ್ನೂ ಕೂಡ ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ. ಎಂತಹ ಉದಾತ್ತತೆಯಿದು! ಅಥರ್ವವೇದ, 'ಉತ್ಥಾಮಾತಃ ಪುರುಷ ಮಾವ ಪತ್ಥಾ' - ಹೇ ಜೀವನೇ, ಮೇಲಕ್ಕೆದ್ದು ನಡೆ, ಕೆಳಗೆ ಬೀಳಬೇಡವೆನ್ನುತ್ತದೆ. ಉದ್ಯಾನಂ ತೇ ಪುರುಷ ನಾವಯಾನಂ - ನಿನ್ನ ಮಾರ್ಗ ಮೇಲಕ್ಕಿದೆ, ಕೆಳಕ್ಕೆ ಹೋಗುವುದಲ್ಲವೆನ್ನುತ್ತದೆ. ಇಂತಹ ನೂರಾರು ದಿವ್ಯ ಮಾರ್ಗದರ್ಶನಗಳನ್ನು ನೀಡುವ ವೇದಮಂತ್ರಗಳು ನಾಲ್ಕು ವೇದಗಳಲ್ಲಿಯೂ ಕಾಣಸಿಗುತ್ತವೆ. ಒಬ್ಬ ಧಾರ್ಮಿಕ (ಧರ್ಮ ಮಾರ್ಗಿ) ಹೇಗಿರುತ್ತಾನೆಂದರೆ: 
ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ ವ್ರತಾ ರಕ್ಷೇಥೇ ಅಸುರಸ್ಯ ಮಾಯಯಾ | 
ಋತೇನ ವಿಶ್ವಂ ಭುವನಂ ವಿ ರಾಜಥಃ ಸೂರ್ಯಮಾ ಧತ್ಥೋ ದಿವಿ ಚಿತ್ರ್ಯಂ ರಥಮ್ || (ಋಕ್.೫.೬೩.೭.)
     ಹೇ ಮಾನವರೇ, ಧರ್ಮದಿಂದ ಜ್ಞಾನಿಗಳಾಗುತ್ತೀರಿ. ಪರಮಾತ್ಮನ ಪ್ರಜ್ಞೆಯಿಂದ, ವೇದಜ್ಞಾನದಿಂದ (ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ) ವ್ರತಗಳನ್ನು ರಕ್ಷಿಸುತ್ತೀರಿ. ಯಜ್ಞ ಮತ್ತು ನ್ಯಾಯದಿಂದ ಸಮಸ್ತ ಪ್ರಪಂಚವನ್ನೂ, ಸಿಂಗರಿಸುತ್ತೀರಿ. ಜ್ಞಾನಮಯವಾದ ಸ್ಥಿತಿಯಲ್ಲಿ ಭಗವಂತನನ್ನು ಎಲ್ಲಡೆಯಿಂದಲೂ ಜೀವನಗತವಾಗಿ ಮಾಡಿಕೊಳ್ಳುತ್ತೀರಿ. ವಿಪಶ್ಚಿತಾ, ವ್ರತಾ ಮತ್ತು ಸೂರ್ಯ ಆಧತ್ಥಃ ಎಂಬ ಉಲ್ಲೇಖಗಳು ಅನುಕ್ರಮವಾಗಿ, ಜ್ಞಾನ, ಕರ್ಮ ಮತ್ತು ಉಪಾಸನೆಗಳನ್ನು ಸೂಚಿಸುತ್ತವೆ. ಧರ್ಮ ಮಾರ್ಗದಲ್ಲಿ ನಡೆಯುವವರು ಜಗತ್ತಿಗೆ ಭೂಷಣಪ್ರಾಯರಾಗಿರುತ್ತಾರೆ ಮಾತ್ರವಲ್ಲದೆ ಜಗತ್ತನ್ನು ಸುಂದರಗೊಳಿಸುತ್ತಾರೆ. ಜೀವರು ಸಾಧಿಸಬೇಕಾದ ಪ್ರಥಮ ಪುರುಷಾರ್ಥವೆಂದರೆ ಇದೇ ಆಗಿದೆ. 
ಅರ್ಥ:
   ಇನ್ನು ದ್ವಿತೀಯ ಪುರುಷಾರ್ಥವಾದ ಅರ್ಥದ ಕುರಿತು ಅವಲೋಕಿಸೋಣ. ಹಣ ಸಂಪಾದನೆ, ಅದು ಯಾವ ರೀತಿಯಿಂದಲೇ ಆಗಲಿ ಮಾಡಬೇಕು, ಹೆಚ್ಚು ಶ್ರೀಮಂತರಾಗಬೇಕು ಅನ್ನುವ ಹಪಾಹಪಿತನವನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಇಂದಿನ ಜೀವನರೀತಿಗೆ ಹಣ ಸಂಪಾದನೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ. ಅದರೆ ಅದನ್ನು ಧರ್ಮದ ರೀತಿಯಲ್ಲಿ, ಧರ್ಮದ ಚೌಕಟ್ಟಿನಲ್ಲಿ ಮಾಡಬೇಕು ಅನ್ನುತ್ತದೆ ವೇದ. ಬಡತನ ಕುಕರ್ಮಗಳನ್ನು ಮಾಡಲು ಪ್ರೇರಿಸುವುದರಿಂದ ಅರ್ಥದ ಗಳಿಕೆ ಪುರುಷಾರ್ಥದಲ್ಲಿ ಎರಡನೆಯ ಮಹತ್ವದ ಸ್ಥಾನ ಗಳಿಸಿದೆ. ಅರಾಯಿ ಕಾಣೇ ವಿಕಟೇ ಗಿರಿಂ ಗಚ್ಛ ಸದಾನ್ವೇ || (ಋಕ್.೧೦.೧೫೫.೧.) -ಸದಾ ಪೀಡೆಗಳನ್ನು ಹುಡುಕುತ್ತಿರುವ ಕೆಡುಕಿನ ದರಿದ್ರವೇ, ತೊಲಗು; ವಯಂ ಸ್ಯಾಮ ಪತಯೋ ರುಣಾಮ್ || (ಯಜು.೨೩.೬೫.) -ನಾವು ಸಂಪತ್ತಿನ ಒಡೆಯರಾಗೋಣ, ಇತ್ಯಾದಿ ಉಕ್ತಿಗಳು ಅರ್ಥದ ಮಹತ್ವ ಸಾರುತ್ತಿವೆ.
     ಹಣ ಸಂಪಾದನೆ ಹೇಗೆ ಮಾಡಬೇಕು? ನಮ್ಮ ರಾಜಕಾರಣಿಗಳು ರಾಷ್ಟ್ರದ ಅಭಿವೃದ್ಧಿಗಾಗಿ ಖರ್ಚು ಮಾಡಬೇಕಾದ ಕೋಟಿ, ಕೋಟಿ ಸಾರ್ವಜನಿಕರ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಇವರ ಪಾಪದ ಭಾರವನ್ನು ಜನಸಾಮಾನ್ಯರು ಹೊರಬೇಕಾಗಿದೆ. ಬಡವರ ಉದ್ಧಾರದ ಹೆಸರಿನಲ್ಲಿ ಹಣ ಮಾಡುವ ಇವರುಗಳು ದೇಶವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು, ಭ್ರಷ್ಟಾಚಾರವನ್ನು ವಿರೋಧಿಸುವ ಸಾತ್ವಿಕ ಶಕ್ತಿಗಳನ್ನು ತುಳಿಯುತ್ತಿರುವುದು ನಮ್ಮ ದೌರ್ಭಾಗ್ಯ. ಸಜ್ಜನಶಕ್ತಿ ಜಾಗೃತಗೊಳ್ಳುವವರೆಗೆ, ಜನರು ಎಚ್ಚರಗೊಳ್ಳದಿರುವವರೆಗೆ ಈ ಪರಿಸ್ಥಿತಿಯಿಂದ ನಮಗೆ ಬಿಡುಗಡೆಯಿಲ್ಲ. ಈ ಜಾಗರಣದ ಕೆಲಸವನ್ನು ಪ್ರತಿ ಧಾರ್ಮಿಕ ನಾಗರಿಕ ತನ್ನ ಕರ್ತವ್ಯವೆಂಬಂತೆ ಮಾಡಬೇಕು. ಕನಿಷ್ಟ ಪಕ್ಷ ಅಂತಹ ಕೆಲಸ ಮಾಡುವವರಿಗೆ ಸಹಕಾರಿಯಾಗಿಯಾದರೂ ಇರಬೇಕು. ಅಕ್ರಮ ಹಣ ಸಂಪಾದನೆ ಸಲ್ಲದು, ಹಣ ಸಂಪಾದನೆಯೇ ಗುರಿಯಾಗಬಾರದು ಎನ್ನುತ್ತದೆ ಋಗ್ವೇದದ ಈ ಮಂತ್ರ:
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ |
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ || (ಋಕ್.೧೦.೩೪.೧೩.)
     ದಾಳಗಳಿಂದ ಜೂಜಾಡಬಾರದು, ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. ನಿಜವಾದ ದುಡಿಮೆಯಿಂದ ಲಭಿಸುವ ಹಣದಲ್ಲಿ ಸಂತುಷ್ಟನಾಗಿರು. ಕಷ್ಟದ ದುಡಿಮೆಯಲ್ಲೇ ಗೋಸಂಪತ್ತು,  ದಾಂಪತ್ಯಸುಖವಿದೆ ಎಂದು ಇದರ ಅರ್ಥ. ಇಲ್ಲಿ ದಾಳ ಎಂದರೆ ಪಗಡೆಯಾಟದಲ್ಲಿ ಉಪಯೋಗಿಸುವ ಆಟದ ಸಾಧನವೆಂಬ ಅರ್ಥ ಬರುವುದಾದರೂ, ಅದನ್ನು ಸೂಚ್ಯವಾಗಿ ಬಳಸಲಾಗಿದ್ದು, ಎಲ್ಲಾ ರೀತಿಯ ಜೂಜುಗಳಿಗೂ, ಅಕ್ರಮ ರೀತಿಯಲ್ಲಿ ಹಣ ಸಂಪಾದಿಸುವ ಎಲ್ಲಾ ವಿಧಾನಗಳಿಗೂ (ಉದಾ: ಬೆಟ್ಟಿಂಗ್, ಕಾಳಸಂತೆ, ಲಾಟರಿ, ಲಂಚ, ಇತ್ಯಾದಿ) ಇದು ಅನ್ವಯವಾಗುತ್ತದೆ. 
     ಅಥರ್ವವೇದದ ಈ ಮಂತ್ರ ಅನುಕರಣೀಯ, ಪುರುಷಾರ್ಥದ ನೈಜ ಮೌಲ್ಯ ಇಲ್ಲಿ ಕಾಣಸಿಗುತ್ತದೆ:
ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ ||  (ಅಥರ್ವ.೩.೨೪.೫.)
     ನೂರು ಕೈಗಳಿಂದ ಚೆನ್ನಾಗಿ ಸಂಪಾದನೆ ಮಾಡು. ಸಾವಿರ ಕೈಗಳಿಂದ ಚೆನ್ನಾಗಿ ಕೊಡು. ನಿನ್ನ ಕಾರ್ಯದ ವಿಸ್ತಾರ ಈ ರೀತಿ ಸಾಧಿತವಾಗಲಿ ಎಂಬ ಆಶಯ ಎಷ್ಟು ಉದಾತ್ತವಾಗಿದೆ! ಎಷ್ಟು ಕಷ್ಟಪಟ್ಟು ದುಡಿಯಲು ಸಾಧ್ಯವೋ ಅಷ್ಟು ದುಡಿದು ಹೇರಳವಾಗಿ ಹಣ ಸಂಪಾದನೆ ಮಾಡಬೇಕು; ಅದನ್ನು ಧಾರಾಳವಾಗಿ ಅವಲಂಬಿತರಿಗೆ, ಅವಶ್ಯಕತೆಯಿರುವವರಿಗೆ ಉಪಯೋಗಿಸು ಎಂಬುದರಲ್ಲಿ ಜೀವನದ ಸಾರ್ಥಕತೆಯಿದೆ ಎನ್ನುವ ಉದಾತ್ತತೆಗೆ ಸಾಟಿಯಿಲ್ಲ. ಹಣ ಮಾಡಬೇಕು, ಆದರೆ ಅಕ್ರಮವಾಗಿಯಲ್ಲ. ಹಾಗಾದರೆ ಹಣವನ್ನು ಸಂಪಾದಿಸುವುದು ಹೇಗೆ? ಈ ಮಂತ್ರ ದಾರಿ ತೋರಿಸುತ್ತಿದೆ:
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಬ್ಯಾತ್ || (ಋಕ್.೧೦.೩೧.೨.)
     ಹಣವು ಎಲ್ಲೆಡೆಯೂ ಇದೆ. ಅದಕ್ಕಾಗಿ ನ್ಯಾಯ ಮತ್ತು ಸತ್ಯದ ಹಾದಿಯಲ್ಲಿ ವಿಧೇಯತೆಂದ ಸಾಗಬೇಕು. ಸದ್ವಿಚಾರ, ಸದಾಚಾರಗಳಿಂದ ಕೂಡಿದ ಮಾತುಗಳನ್ನಾಡಬೇಕು. ಮನಸ್ಸಿನಿಂದ ಶ್ರೇಯಸ್ಕರವಾದ ಶಕ್ತಿಯನ್ನು ಗ್ರಹಿಸಬೇಕು. ಈ ದಾರಿಯಲ್ಲಿ ನಡೆದು ಮಾಡುವ ಸಂಪಾದನೆಯೇ ನೈಜ, ಅರ್ಥಪೂರ್ಣ ಅರ್ಥಸಂಪಾದನೆ. ಸದ್ವಿಚಾರಗಳನ್ನು ಮಾಡೋಣ, ಸದ್ರೀತಿಯಲ್ಲಿ ಸಂಪಾದಿಸೋಣ, ಸಮಾಜದಿಂದ ನಾವು ಗಳಿಸುವ ಹಣವನ್ನು ಸಮುಚಿತ ರೀತಿಯಲ್ಲಿ ಸ್ವಂತದ ಉಪಯೋಗಕ್ಕೆ ಅಲ್ಲದೆ ಸಮಾಜದ ಒಳಿತನ್ನೂ ಗಮನದಲ್ಲಿರಿಸಿ ವಿನಿಯೋಗಿಸೋಣ ಎಂಬ ವೇದದ ಕರೆ ಸದಾಕಾಲಕ್ಕೂ ಒಪ್ಪಿಗೆಯಾಗುವಂತಹದು.
[ಆಧಾರ: ಪಂ. ಸುಧಾಕರ ಚತುರ್ವೇದಿಯವರ 'ವೇದೋಕ್ತ ಜೀವನ ಪಥ'.]


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ