ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಏಪ್ರಿಲ್ 22, 2012

ಸಾರಗ್ರಾಹಿಯ ರಸೋದ್ಗಾರಗಳು - 5


     ಪಂ. ಸುಧಾಕರ ಚತುರ್ವೇದಿಯವರೇ ಹಾಗೆ. ನಡೆಯೊಂದು ತರಹ, ನುಡಿಯೊಂದು ತರಹದವರಲ್ಲ. ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ೧೧೬ ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಸ್ತ್ರೀಯರು ವೇದ ಮಂತ್ರಗಳನ್ನು ಹೇಳಬಾರದು ಎಂಬ ವಿಚಾರ ಸಂಪೂರ್ಣ ಅವೈದಿಕ ಎಂದು ಸಾಧಾರ ಹೇಳುವ ಅವರ ಪ್ರತಿವಾರದ ಸತ್ಸಂಗದಲ್ಲಿ ನಡೆಯುವ ಅಗ್ನಿಹೋತ್ರದ    ಕಾರ್ಯವನ್ನು ಮಂತ್ರಸಹಿತವಾಗಿ ಮಹಿಳೆಯರೇ ಮಾಡುತ್ತಾರೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************

ಮೂರ್ತಿಪೂಜೆಯ ತಪ್ಪು ಕಲ್ಪನೆ
     ಒಮ್ಮೆ ಆರ್ಯ ಸಮಾಜದ ಒಬ್ಬ ದೊಡ್ಡ ವಿದ್ವಾಂಸರು ಮತ್ತು ಮಾಧವಾಚಾರ್ಯ ಅನ್ನುವ ಪೌರಾಣಿಕರ ಜೊತೆ ಹೈದರಾಬಾದಿನಲ್ಲಿ ಮೂರ್ತಿಪೂಜೆ ಕುರಿತು ಚರ್ಚೆ, ಜಿಜ್ಞಾಸೆ ನಡೆಯುತ್ತಿತ್ತು. ಆ ಮಾಧವಾಚಾರ್ಯರಿಗೆ ಇನ್ನೇನೂ ಉಪಾಯ ಹೊಳೆಯಲಿಲ್ಲ, ದಯಾನಂದರ ಫೋಟೋ ತಂದು ಎದುರಿಗೆ ಇಟ್ಟರು. "ನೀವು ಮೂರ್ತಿ ಪೂಜೆ ಮಾಡಲ್ಲ ಅಲ್ವಾ? ಹಾಗಾದರೆ ಈ ದಯಾನಂದರ ಫೋಟೋಗೆ ಎಕ್ಕಡದಿಂದ ಹೊಡೀರಿ, ನೋಡೋಣ" ಅಂದರು. ಆ ವಿದ್ವಾಂಸ ಪುಣ್ಯಾತ್ಮ ಯೋಚನೆ ಮಾಡಲಿಲ್ಲ, ಆ ದಯಾನಂದರ ಫೋಟೋಗೆ ಚಚ್ಚಿಯೇ ಬಿಟ್ಟರು. ನಾನು ಹೇಳಿದೆ, "ಪಂಡಿತಜಿ, ನಿಮ್ಮ ಬುದ್ಧೀನೂ ಜೇಡಿ ಮಣ್ಣಾಯಿತಾ? ಆ ಫೋಟೋ ಯಾರದು? ದಯಾನಂದರದು. ಆ ದಯಾನಂದರಿಗೆ ಒಂದು ಆಕಾರ ಇತ್ತು. ಅದರ ಫೋಟೋ ಹಿಡಿಯುವುದು ಸಾಧ್ಯವಿತ್ತು. ಹಾಗಾಗಿ ನೀವು ಮಾಡಿದ್ದು ಸರಿಯಲ್ಲ. ನಿರಾಕಾರನಾದ ಭಗವಂತನ ಫೋಟೋ ಹಿಡಿಯುವುದಕ್ಕೆ ಸಾಧ್ಯವಿದೆಯೇ? ಇಲ್ಲದಿರುವಾಗ ಕಲ್ಪನೆಯ ಆಕಾರವನ್ನು ಭಗವಂತ ಅನ್ನಬಹುದೇ ಎಂದು ಕೇಳಬಹುದಿತ್ತಲ್ಲವೇ?"
ಪರಮಾತ್ಮ ಎಲ್ಲಿದ್ದಾನೆ?
     ನನಗೆ ಒಂದು ಟೈಟಲ್ಲು ಸಿಕ್ಕಿದೆ, ಪಂಡಿತಜಿ ಸುಮ್ಮನೆ ವೇದ, ವೇದ ಅಂತ ಹೇಳ್ತಾರೆ, ಅವರು ನಾಸ್ತಿಕರು, ದೇವಸ್ಥಾನಕ್ಕೆ ಹೋಗೋದಿಲ್ಲ, ಮಸೀದಿಗೆ ಹೋಗೋದಿಲ್ಲ, ಚರ್ಚಿಗೂ ಹೋಗೋದಿಲ್ಲ. ಹೌದು, ನಾನು ಎಲ್ಲಿಗೂ ಹೋಗುವುದಿಲ್ಲ. ಆ ಎಲ್ಲಾ ನನ್ನ ಎದೆಯಲ್ಲೇ ಇದೆ. ದೇವಸ್ಥಾನವೂ ನನ್ನ ಎದೆಯಲ್ಲಿದೆ, ಮಸೀದಿಯೂ ನನ್ನ ಎದೆಯಲ್ಲಿದೆ, ಚರ್ಚೂ ನನ್ನ ಎದೆಯಲ್ಲಿದೆ. ಪರಮಾತ್ಮ ಇಲ್ಲೇ ಇದ್ದಾನೆ. ನಾನು ಹೊರಗೆ ಇನ್ನೆಲ್ಲಿ ಅವನನ್ನು ಹುಡುಕಲು ಹೋಗಬೇಕು? ಇದು ಒಂದು ಪ್ರಶ್ನೆ, ಇದನ್ನು ಸ್ವಲ್ಪ ದರ್ಶನ ಶಾಸ್ತ್ರಕ್ಕೆ ಹೋಗಬೇಕು. ವ್ಯಾಪ್ಯ-ವ್ಯಾಪಕ- ವ್ಯಾಪಕ ಪರಮಾತ್ಮ, ಬೊಂಬೆಯಲ್ಲೂ ಇದ್ದಾನೆ, ಬೊಂಬೆಯ ಹೊರಗೂ ಇದ್ದಾನೆ, ಎಲ್ಲಾ ಕಡೆಯೂ ಇದ್ದಾನೆ, ನೀವು ಪೂಜೆ ಮಾಡುವುದು ವ್ಯಾಪ್ಯನನ್ನೋ, ವ್ಯಾಪಕನನ್ನೋ? ವಿಗ್ರಹ ಪೂಜೆ ಮಾಡ್ತಾ ಇದ್ದರೆ, ಸ್ಪಷ್ಟವಾಗಿದೆ, ನೀವು ವ್ಯಾಪಕನನ್ನಲ್ಲ, ವ್ಯಾಪ್ಯನನ್ನು ಪೂಜೆ ಮಾಡ್ತಾ ಇದೀರಿ. ಬಲ್ಬು ಇದೆ, ಅದರಲ್ಲಿ ವಿದ್ಯುತ್ ಇದೆ, ಸ್ವಿಚ್ ಹಾಕಿದರೆ ಅದರಲ್ಲಿ ಲೈಟು ಹತ್ತುತ್ತದೆ, ಆ ಸ್ವಿಚ್ಚೇ ಇಲ್ಲದಿದ್ದರೆ ಆ ಬಲ್ಬು ೧೦೦ ವೋಲ್ಟಿನದಾಗಿರಲಿ, ೧೦೦೦ ವೋಲ್ಟಿನದಾಗಿರಲಿ, ಹತ್ತುತ್ತಾ? ಸ್ವಿಚ್ಚು ಒತ್ತಿದರೇ ಹತ್ತುವುದು, ಇಲ್ಲದಿದ್ದರೆ ಹತ್ತುವುದಿಲ್ಲ, ಹಾಗೆಯೇ ನಿಮಗೆ ಧ್ಯಾನ ಅನ್ನುವುದು ಸ್ವಿಚ್ಚು, ಆ ಸ್ವಿಚ್ಚಿರಬೇಕು, ಆ ಸ್ವಿಚ್ಚು ನಿಮ್ಮ ಎದೆಯಲ್ಲೇ ಇದೆ. ಆಗ ಪರಮಾತ್ಮನನ್ನು ನೀವು ಕಂಡುಕೊಳ್ಳುತ್ತೀರಿ, ಜ್ಞಾನಕ್ಕೇ ಸೊನ್ನೆ ಬಿದ್ದಿದ್ದರೆ ಪರಮಾತ್ಮನೂ ಇಲ್ಲ, ಜೀವಾತ್ಮನೂ ಇಲ್ಲ, ಎಲ್ಲಾ ಬರೀ ಮಾತು, ಟೊಳ್ಳು ಮಾತು,
ಆಲೋಚನೆ ಮಾಡೋಣ
      ಪಕ್ಕಾ ಮೂರ್ತಿಪೂಜಕರಾದ ಮಧ್ವಾಚಾರ್ಯರೂ ಕೂಡ ಒಪ್ಪಿಕೊಳ್ಳುತ್ತಾರೆ. 'ಯಾವುದು ವಿಷ್ಣುವಲ್ಲವೋ ಅದನ್ನು ವಿಷ್ಣು ಅಂತ ಪೂಜೆ ಮಾಡೋನು, ಯಾವುದರಲ್ಲಿ ವಿಷ್ಣು ಇದ್ದಾನೋ ಅದನ್ನು ಬಿಟ್ಟು ಬೇರೆ ಪದಾರ್ಥಗಳನ್ನು ಪೂಜೆ ಮಾಡೋನು, ಅವನಿಗೆ ನೂರು ಜನ್ಮಕ್ಕೂ ಉದ್ಧಾರ ಇಲ್ಲ' ಅಂತಾ ಹೇಳ್ತಾರೆ. ಮಧ್ವಾಚಾರ್ಯರು ಕೃಷ್ಣನ ಪ್ರತಿಮೆ ಇಟ್ಟುಕೊಂಡು ಪೂಜೆ ಮಾಡೋರು, ಅವರ ಬಾಯಲ್ಲೇ ಈ ಮಾತು ಬರುತ್ತೆ. ಚತುರರು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ, ಧ್ಯಾನ ಅನ್ನುವ ಪದ ಉಪಯೋಗಿಸುತ್ತಾರೆಯೇ ಹೊರತು ಪೂಜೆ ಅನ್ನುವ ಪದ ಉಪಯೋಗಿಸುವುದಿಲ್ಲ. ಮೂರ್ತಿಪೂಜೆ ಅಂತ ಹೇಳುವುದಿಲ್ಲ ಅವರು - ಧ್ಯಾನ - ಅದರೊಳಗೆ ಪರಮಾತ್ಮ ಇದಾನೆ ಅಂತ ಧ್ಯಾನ ಮಾಡಿ ಅಂತಾರೆ, ಮತ್ತೆ ಅದೇ ಪ್ರಶ್ನೆ ಬರುತ್ತೆ, ಅಲ್ಲೇ ಇದಾನಾ ಅವನು? ಸರ್ವವ್ಯಾಪಕನನ್ನು ಒಂದು ಕಲ್ಲಿನ ಮೂರ್ತಿಯ ಒಳಗೆ ಅಡಕ ಮಾಡೋಕಾಗುತ್ತಾ? ಆಗುವುದಿಲ್ಲ. ಆದ್ದರಿಂದ ನಾವು, ಜೀವಾತ್ಮರು, ಚೇತನ ಸ್ವರೂಪರು, ಅದರಲ್ಲೂ ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ನಾವೇನೇ ಹಾಗೆ ಮಾಡುತ್ತಾ ಕುಳಿತುಕೊಂಡರೆ ಇನ್ನು ತಿಳಿಯದವರು  ಇನ್ನೇನು ಮಾಡ್ತಾರೆ? ನಮ್ಮನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ
ಸುಪ್ಪತ್ತಿಗೆ
     ಪುರಾಣದ ಕಥೆಗಳು, ನಾಟಕ, ನೃತ್ಯ ಇವುಗಳನ್ನು ನೋಡ್ತಾ ಇದ್ದರೆ ರಾತ್ರಿ ಪೂರ್ತಾ ನಿದ್ದೆ ಬರುವುದಿಲ್ಲ, ವೇದ, ಉಪನಿಷತ್ತುಗಳ ವಿಚಾರ ಕೇಳ್ತಾ ಇದ್ದರೆ ಸ್ವಲ್ಪ ಹೊತ್ತಿಗೇ ನಿದ್ದೆ ಬಂದುಬಿಡುತ್ತೆ. ಒಬ್ಬ ಭಕ್ತ ಕೇಳಿದ, "ಯಾಕೆ ಸ್ವಾಮಿ, ಹೀಗಾಗುತ್ತೆ? " ಅದಕ್ಕೆ ದಯಾನಂದರು ಹೇಳಿದರು: "ಪುರಾಣದ ಕಥೆಗಳು, ನಾಟಕ, ನೃತ್ಯ, ಎಲ್ಲಾ ಮುಳ್ಳಿನ ಹಾಸಿಗೆ ಇದ್ದಂತೆ, ವೇದ, ಉಪನಿಷತ್ತುಗಳು ಸುಪ್ಪತ್ತಿಗೆ ಇದ್ದಂತೆ. ಮುಳ್ಳಿನ ಹಾಸಿಗೆ ಮೇಲೆ ಮಲಗಿದರೆ ನಿದ್ದೆ ಹೇಗೆ ಬರಬೇಕು? ಸುಪ್ಪತ್ತಿಗೆ ಮೇಲೆ ಮಲಗಿದರೆ ನಿದ್ದೆ ಬರದೆ ಇದ್ದರೆ ಇನ್ನು ಯಾವುದರ ಮೇಲೆ ಬರಬೇಕು?"
ಸ್ತ್ರೀಯರು ಮತ್ತು ವೇದ
     ನಮ್ಮ ತಾಯಿ, ತಂದೆ ರಾತ್ರಿ ಹೊತ್ತು ಹವನಕ್ಕೆ ಕುಳಿತುಕೊಳ್ಳೋರು, ತಂದೆ ಮಂತ್ರ ಹೇಳೋರು, ತಾಯಿ ಬಾಯಿ ಮುಚ್ಚಿಕೊಂಡು ಕೂರೋರು, ನಾನು ಕೇಳ್ತಾ ಇದ್ದೆ, 'ಅಮ್ಮಾ, ಯಾಕೆ ಹೀಗೆ?' ಅವರು ಹೇಳುತ್ತಿದ್ದರು: "ಅಯ್ಯೋ, ಹೆಂಗಸರು ವೇದ ಹೇಳೋದು ಉಂಟಾ? ಮಹಾ ಪಾಪ".  [ಉತ್ತರ ಕೊಡೋಕ್ಕೆ ಆಗದೇ ಹೋದರೆ ಇಂತಹಾ ಮಾತುಗಳನ್ನು ಆಡುವ ಇತರ ಪಂಡಿತರೆನಿಸಿಕೊಂಡವರ ಮಾತನ್ನೇ ಅವರು ಹೇಳಿದ್ದರು.]  ವೇದದಲ್ಲಿ ಋಷಿಗಳಿದ್ದಾರಲ್ಲಾ, ಹಾಗೆಯೇ ಋಷಿಕೆಯರೂ ಇದ್ದಾರೆ. ನಾನೇ ಒಂದು ಋಗ್ವೇದದಲ್ಲಿ ೯೭ ಋಷಿಕೆಯರನ್ನು ಗುರುತಿಸಿದ್ದೇನೆ. ಇನ್ನು ಅಥರ್ವವೇದ, ಯಜುರ್ವೇದ ಇವನ್ನೆಲ್ಲಾ ತೆಗೆದುಕೊಂಡರೆ ಇನ್ನು ಎಷ್ಟು ಜನ ಋಷಿಕೆಯರನ್ನು ಗುರುತಿಸಬಹುದು ಊಹಿಸಿ. ಅವರೆಲ್ಲಾ ಪಾಪ ಮಾಡಿದರಾ? ಋಷಿಕೆಯರೆಲ್ಲಾ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿದ್ದಾರೆ, ಅವರೆಲ್ಲಾ ಪಾಪ ಮಾಡಿದರಾ? ಅವರೆಲ್ಲಾ ಪಾಪ ಮಾಡಿದ್ದರೆ ಅವರ ಹಿಂದೆಯೇ ನಾವೂ ಹೋಗೋಣ, ಈ ಪುಣ್ಯಾತ್ಮರು ಇದ್ದಾರಲ್ಲಾ, ಕಲ್ಲು, ಮಣ್ಣು ಪೂಜೆ ಮಾಡೋರು ಅವರು ಇಲ್ಲೇ ಇರಲಿ, ನಾವು ಪಾಪ ಮಾಡಿದೋರ ಜೊತೆ ಹೋಗೋಣ!
..ಮುಂದುವರೆಯುವುದು.
***************
ಹಿಂದಿನ ಲೇಖನಕ್ಕೆ ಲಿಂಕ್:

9 ಕಾಮೆಂಟ್‌ಗಳು:

  1. ತುಂಬಾ ಆಸಕ್ತಿಕರವಾಗಿದೆ ವಿಷಯದ ಚರ್ಚೆ....

    ಪ್ರತ್ಯುತ್ತರಅಳಿಸಿ
  2. ಈ ದೇವರು ಎನ್ನೋ ಪದ ಎಲ್ಲರ ಚರ್ಚೆಗೆ ಕಾರಣ ಆಗಿಬಿಡುತ್ತೆ. ದೇವರ ಅಸ್ತಿತ್ವವನ್ನು ಎಲ್ಲರೂ ನಂಬುತ್ತಾರೆ. ಆದರೆ ಮೂರ್ತಿಪೂಜೆ ವಿಚಾರ ಬಂದಾಗ ಶುರುವಾಗುತ್ತೆ ಗೊಂದಲ. ದಯಾನಂದರು ಮಾತ್ರವೇ ಇಶ್ಟು ನಿಷ್ಟುರವಾಗಿ ಮೂರ್ತಿ ಪೂಜೆಯನ್ನು ವಿರೋಧಿಸುತ್ತಾರೆ.ಶಂಕರರೂ ಕೂಡ ಪೂರ್ತಿಪೂಜೆಯ ಪರವಾಗಿ ವಕಾಲತ್ತು ವಹಿಸುವುದಿಲ್ಲ. ಆದರೆ ಈ ಮಟ್ಟಿಗೆ ವಿರೋಧಿಸುವುದಿಲ್ಲ.ನನ್ನ ಸ್ವಭಾವ ನಿಮಗೆ ಗೊತ್ತು. ಸಮಾಜ ಹೊರತಾಗಿ ನಾನಿಲ್ಲ. ಈ ಸಮಾಜದಲ್ಲಿ ಎಷ್ಟೊಂದು ಜನ ತಪಸ್ವಿಗಳು ಆಗಿ ಹೋಗಿದ್ದಾರೆ, ಅವರೆಲ್ಲಾ ಹುಚ್ಚರೇ? ವಿಗ್ರಹ ಇತ್ತೀಚೆಗೆ ರೂಢಿಗೆ ಬಂತೆಂದು ಕೊಂಡರೂ ಮನಸ್ಸಿನಲ್ಲಿ ಯಾವುದೋ ಆಕಾರವನ್ನು ಕಲ್ಪಿಸಿಕೊಂಡು ತಪಸ್ಸನ್ನು ಮಾಡಿದ ಹಲವು ಉಧಾಹರಣೆಗಳನ್ನು ನಾವು ಕಾಣುತ್ತೇವೆ. ಅಗ್ನಿ ಮುಂದೆ ಕುಳಿತು ಹೋಮ ಮಾಡುತ್ತಾ ಅಲ್ಲೇ ಭಗವಂತನನ್ನು ಕಂಡ ಉಧಾಹರಣೆಗಳೂ ಸಿಗುತ್ತವೆ. ಅಂತಿಮವಾಗಿ ತನ್ನ ಮನದೊಳಗೇ ಭಗವಂತನನ್ನು ಕಾಣುವುದು ಸತ್ಯವಾದರೂ ಕೂಡ ಯಾವುದೋ ಒಂದು ಆಕಾರದಲ್ಲಿ ಭಗವಂತನನ್ನು ಆರೋಪಿಸಿಕೊಂಡು ಅದರಲ್ಲಿ ಭಗವಂತನನ್ನು ಕಂಡು ಆನಂದ ಪಟ್ಟ ಉಧಾಹರಣೆಗಳನ್ನು ಕೇಳುತ್ತೇವೆ. ಇದರಲ್ಲಿ ಆಗುವ ತೊಂದರೆ ಏನು? ಯಾಕೆ ಈ ಮಟ್ಟದ ಮೂರ್ತಿ ಪೂಜೆಯ ವಿರೋಧ? ಯಾರೋ ಪುರೋಹಿತರು ಅವರ ಜೀವನೋಪಾಯಕ್ಕಾಗಿ ಮಾಡಿಸುವ ಪೂಜಾ ಕ್ರಮ ಬೇಡ. ಆದರೆ ಪತ್ರಂ, ಪುಷ್ಫಂ, ಫಲಂ, ತೋಯಂ......ಎಂದು ಹೇಳುವಂತೆ ಹೂವು ಹಣ್ಣುಗಳಿಲ್ಲದಿದ್ದರೂ ನೀರಿನಿಂದಲೇ ಪೂಜೆ ಮುಗಿಸುವ ಅತ್ಯಂತ ಸರಳ ಕ್ರಮಗಳನ್ನು ರೂಢಿಗೆ ತಂದಿರುವ ಹಿಂದೆ ಸದುದ್ಧೇಶ ಇಲ್ಲದಿಲ್ಲ. ನಾನು ಎರಡೂ ರೀತಿಯಲ್ಲಿ ಸಂತೋಷವನ್ನು ಕಂಡಿದ್ದೇನೆ. ಮನಸ್ಸು ವ್ಯಾಕುಲ ಗೊಂಡಿದ್ದಾಗ ಅದನ್ನು ಒಂದೆಡೆ ನಿಲ್ಲಿಸಬೇಕಾದರೆ ಪೂರ್ತಿಯ ಮುಂದೆ ಕುಳಿತು ನನ್ನ ಮನಸ್ಸಿಗೆ ಹಿತವಾಗುವಂತೆ ಮಂತ್ರವನ್ನು ಹೇಳುತ್ತಾ ಅರ್ಚಿಸಿ ಸಮಾಧಾನ ಕಂಡಿದ್ದೇನೆ. ಏಕಾಂತದಲ್ಲಿ ಧ್ಯಾನಾಸಕ್ತನಾಗಿ ಕುಳಿತು ಅದರಲ್ಲೂ ಸಮಾಧಾನ ಕಂಡಿದ್ದೇನೆ. ನಾವು ಮಾಡುವ ಕ್ರಿಯೆಗಳು ಇನ್ನೊಬ್ಬರಿಗೆ ಹಿಂಸೆಯಾಗಬಾರದೇ ಹೊರತೂ ನಮ್ಮ ಮನಸ್ಸಿಗೆ ವಿರುದ್ಧವಾಗಿ ಯಾವುದೋ ಉನ್ನತ ಆದರ್ಶವನ್ನು ಕಣ್ಮುಂದೆ ಇಟ್ಟುಕೊಂಡು ಅತ್ತಲೂ ಹೋಗಲಾರದೆ ಇತ್ತಲೂ ಬಾರಲಾರದೆ ಡಿ.ವಿ.ಜಿ ಯವರ "ಸಿಂಬಳದಿ ನೊಣ" ದಂತೆ ಪರಿಸ್ಥಿತಿ ಬರಬಾರದಲ್ಲವೇ? ನಾವು ದಯಾನಂದರನ್ನೊಬ್ಬರನ್ನೇ ಆದರ್ಶವಾಗಿ ಇಟ್ಟುಕೊಂಡರೆ ಇಡೀ ವುವಸ್ಥೆ ನಮಗೆ ತಪ್ಪಾಗಿಯೇ ಕಾಣುತ್ತದೆ. ನೋಡೀ, ಆರ್ಯಸಮಾಜವು ಆರಂಭಗೊಂಡು ನೂರೈವತ್ತು ವರ್ಷಗಳಾದರೂ ಪ್ರಪಂಚದ ಮೇಲೆ ಅದರ ಪ್ರಭಾವವನ್ನು ಸರಿಯಾಗಿ ಒತ್ತಲು ಸಾಧ್ಯವಾಗಿಲ್ಲ. ಕಾರಣ ಅವರ ನಿಷ್ಟುರ ನಡೆ. ನಾಗರಾಜರ ಮಾನಸಿಕತೆಗೆ ಅದು ಸರಿಹೋದರೂ ಶ್ರೀಧರನ ಮಾನಸಿಕತೆಗೆ ಸರಿಹೋಗಲಾರದು. ಸತ್ಯ ಎಂಬುದು ಎರಡಿಲ್ಲ ಎಂಬುದನ್ನು ನಿರಾಕರಿಸುವಂತಿಲ್ಲ. ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಒಂದು ಶಕ್ತಿಯ ಬಗ್ಗೆ ಯಾರದೂ ತಕರಾರಿಲ್ಲ. ಆದರೆ ರೂಢಿಯಲ್ಕ್ಲಿರುವ ಮೂರ್ತಿ ಪೂಜೆ ಸರಿ ಇಲ್ಲ. ದೇವರು ಮೂರ್ತಿಯಲ್ಲಿ ಮಾತ್ರ ಇದ್ದಾನಾ? ಬೇರೆಲ್ಲೂ ಇಲ್ಲವಾ? ಎಂಬ ವಾದ ಸೂಕ್ತವಲ್ಲ ಎಂಬುದೇ ನನ್ನ ನಿಲುವು. ನನ್ನಂತವನು ಯೋಚಿಸುವ ರೀತಿಯೇ ಬೇರೆ. ಮೂರ್ತಿ ಪೂಜೆ ತಪ್ಪೆಂದಾಗಿದ್ದರೆ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ದೇವಾಲಯಗಳಿಗೆ ಅರ್ಥವೇ ಇರುವುದಿಲ್ಲ.ಯಜ್ಞದ ಬಗ್ಗೆ ಇಷ್ಟೆಲ್ಲಾ ಮಹತ್ವ ತಿಳಿಸುತ್ತೇವೆ. ಆದರೆ ಪ್ರಕೃತಿಯಲ್ಲಿ ಬ್ಯಾಲೆನ್ಸ್ ಮಾಡುವಂತಹ ಪ್ರಕ್ರಿಯೆ ಸಹಜವಾಗಿ ನಡೆಯುತ್ತಿರುತ್ತದೆ.ಆದರೂ ಯಜ್ಞಮಾಡುವುದರಿಂದ ನೂರು ಪ್ರಯೋಜನವನ್ನು ತಿಳಿಸುತ್ತೇವೆ. ಕಾರಣ ಅದರಲ್ಲಿ ಬಂದಿರುವ ನಂಬಿಕೆಯೇ ಪ್ರಧಾನ.ಹಾಗೆಯೇ ಸಾಮಾನ್ಯಜನರು ಒಂದು ಆಕಾರದಲ್ಲಿ ಭಗವಂತನನ್ನು ಕಾಣಬಯಸುತ್ತಾರೆ. ಅದರಲ್ಲಿ ಅವರಿಗೆ ಸಮಾಧಾನ. ಆದರೆ ಅವರೆಲ್ಲಾ ನಿಶ್ಪ್ರಯೋಜಕರು ಮೂರ್ತಿ ಪೂಜೆ ವಿರೋಧಿಸುವವರು ಮಾತ್ರವೇ ಶ್ರೇಷ್ಟರೆನ್ನುವ ಮಾತು ಅಷ್ಟು ಉಚಿತವಾಗಿ ನನಗೆ ಕಾಣುವುದಿಲ್ಲ.
    ಕೊನೆಯಮಾತು: ಮತ್ತೊಬ್ಬರು ಹೀಗೆಯೇ ಇರಬೇಕೆಂಬ ಬಯಕೆ ಯಾದರೂ ಏಕೆ?

    ಅಂತೂ ಈ ಪ್ರಪಂಚ ಇರುವ ವರೆಗೂ ಎರಡು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ೧.ಮೂರ್ತಿಪೂಜೆ ೨.ನಾನು ಯಾರು?

    ಪ್ರತ್ಯುತ್ತರಅಳಿಸಿ
  3. ಪ್ರಿಯ ಶ್ರೀಧರ್, ಒಬ್ಬೊಬ್ಬರ ವಿಚಾರ, ನಂಬಿಕೆಗಳು ಒಂದೊಂದು ತರಹ. ಯಾರೂ ಯಾವುದೇ ವಿಚಾರಗಳನ್ನು ಬಲವಂತವಾಗಿ ಹೇರಬಾರದು ಎಂಬುದನ್ನು ಒಪ್ಪುತ್ತೇನೆ. ತಮಗೆ ಗೊತ್ತಿರುವ ಸತ್ಯ ವಿಚಾರ ಇತರರಿಗೂ ತಿಳಿಯಲಿ, ವೇದದ ಸಾರವೇನು ಎಂಬುದು ಅರ್ಥವಾಗಲಿ ಎಂಬ ದೃಷ್ಟಿಯಿಂದ ಹೇಳಿದರೆ ತಪ್ಪಿಲ್ಲ. ಏನೇ ಇದ್ದರೂ, ವಿಚಾರ ಮಾಡಿ, ವಿಮರ್ಶಿಸಿ ನಿರ್ಧಾರ ಕೈಗೊಳ್ಳಬೇಕಾದವರು ನಾವೇ ಅಲ್ಲವೆ? ಬಹುಜನರು ಪಾಲಿಸುತ್ತಾರೆ ಎಂಬ ಒಂದೇ ಕಾರಣ ಕೊಡುವುದು ಸೂಕ್ತವೇ ಎಂಬುದೂ ವಿಚಾರ ಮಾಡಬೇಕಾದುದು. ಸತ್ಯದ ಸ್ಥಿತಿ ಅರಿವಾಗಲು ವಿವಿಧ ಜನರಿಗೆ ವಿವಿಧ ಸ್ತರಗಳು ಬೇಕಾಗುತ್ತವೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪಾಠ ಹೇಳಲಾಗದು. ನನ್ನ ಈಗಿನ ಮನಸ್ಥಿತಿ ನಿಮಗೇ ತಿಳಿದಿದ್ದಂತೆ ಈಗಿನಂತಿರಲಿಲ್ಲ. ಕ್ರಮೇಣ ಅಭಿಪ್ರಾಯ ಗಟ್ಟಿಗೊಳ್ಳುತ್ತಿದೆಯಷ್ಟೆ.
    ನನ್ನ ವೈಯಕ್ತಿಕ ಅಭಿಪ್ರಾಯ: ದೇವರನ್ನು ಕೇವಲ ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ಕಂಡರೆ ಆ ಸ್ಥಳಗಳು ಮಾತ್ರ ಪವಿತ್ರವೆಂದೆನಿಸುತ್ತವೆ. ದೇವರು ಎಲ್ಲೆಲ್ಲೂ ಇದ್ದಾನೆ ಎಂಬ ಭಾವ ಬಂದರೆ ಎಲ್ಲಾ ಸ್ಥಳಗಳಲ್ಲೂ ಉತ್ತಮ ರೀತಿಯಲ್ಲಿ ನಡೆಯಲು ಸಹಕಾರಿ. ನೀವು ಹೇಳಿದಂತೆ ಪ್ರಶ್ನೆ ಶಾಶ್ವತ. ಉತ್ತರವನ್ನು ನಮ್ಮ ಶಕ್ತಿಗೆ ತಕ್ಕಂತೆ ಅರಿಯಲು ಪ್ರಯತ್ನಿಸುವುದು ಸೂಕ್ತ.

    ಪ್ರತ್ಯುತ್ತರಅಳಿಸಿ
  4. ನಿಜವಾಗಿ ಈ ವಿಚಾರದಲ್ಲಿ ಓದುಗರು ಮುಕ್ತವಾಗಿ ಚರ್ಚೆ ಮಾಡಬೇಕು. ಇಲ್ಲಿ ವಾದಮಾಡಬೇಕೆಂದೇನೂ ಇಲ್ಲ. ಆದರೆ ದೇವರು ಎಂಬುದು ಭಯದ ವಸ್ತುವಾಗಬಾರದು.ನಿರ್ಭಯವಾಗಿ, ಮುಕ್ತವಾಗಿ, ತನ್ನ ಮನಸ್ಸಿನ ನೆಮ್ಮದಿಗೆ ಯಾವುದು ಉಪಯುಕ್ತ ? ಎಂಬುದನ್ನು ಹೇಳಬೇಕು. ನಮ್ಮ ಪರಂಪರೆಯಲ್ಲಿ ನಡೆದು ಬಂದಿರುವ ಪೂಜೆ ಪುನಸ್ಕಾರಗಳು ಪ್ರತಿಶತ ೯೦ ಕ್ಕಿಂತ ಹೆಚ್ಚು ಜನರಿಗೆ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತವೆನ್ನುವ ಮಾತು ಸುಳ್ಳಲ್ಲ. ನನಗೆ ಬೇಕಾದ್ದು ಇಂತಹ ಪರಿಣಾಮ. ಮತ್ತೊಬ್ಬರಿಗೆ ದ್ರೋಹಮಾಡದ, ಹಿಂಸೆ ಮಾಡದ, ಕಿರಿಕಿರಿ ಉಂಟುಮಾಡದ ತನ್ನ ಪಾಡಿಗೆ ತಾನು ತನಗೆ ಬೇಕಾದಂತೆ ಪೂಜೆ ಮಾಡುತ್ತಾನೋ, ಧ್ಯಾನ ಮಾಡುತ್ತಾನೋ, ಸುಮ್ಮನೆ ಕುಳಿತಿರುತ್ತಾನೋ, ಅದು ಅವನಿಗೆ ಬಿಟ್ಟ ವಿಚಾರ. ಅವನ ಪಾಡಿಗೆ ಅವನನ್ನು ಬಿಡೋಣ. ಪೂರ್ತಿ ಪೂಜೆ ಮಾಡುವುದು ಸರಿಯಲ್ಲ. ಮೂರ್ತಿ ಪೂಜೆ ಮಾಡುವುದರಿಂದ ಆ ಸ್ಥಳ ಬಿಟ್ಟು ಬೇರೆಲ್ಲೂ ಭಗವಂತನು ಇಲ್ಲಾ, ಎಂದು ಅರ್ಥ ಬರುತ್ತದೆ, ಎಂದೆಲ್ಲಾ ಹೇಳುವುದರಿಂದ " ನಾನು ನಿಮಗಿಂತ ಒಂದು ಮಟ್ಟ ಮೇಲಿದ್ದೀನೆಂದು ಹೇಳಿಕೊಂಡಂತಾಗುತ್ತದೆ.ಆ ಭಗವಂತನನ್ನು ಕಂಡವರಾರು? ನಾನು ಕಂಡೆ ಎಂದರೆ ಅದು ಡೋಂಗಿ ಮಾತು. ಇಡೀ ಬ್ರಹ್ಮಾಂಡದ ವ್ಯವಸ್ಥೆಯನ್ನು ನಿಯಂತ್ರಿಸುವ ಒಂದು ಶಕ್ತಿ ಇದೆ ,ಎಂಬುದನ್ನು ಅನಿವಾರ್ಯವಾಗಿ ನಂಬಬೇಕು. ಅದನ್ನು ಭಗವಂತನೆಂದಾದರೂ ಕರೆಯಿರಿ, ಯಾವ ಹೆಸರಿನಿಂದಾದರೂ ಕರೆಯಿರಿ. ಆದರೆ ಆ ಶಕ್ತಿಯನ್ನು ನೀವು ಭಗವಂತನೆಂದು ಹೇಳುವಾಗ ಅದನ್ನು ಅಣುವಿನಲ್ಲೂ ಕಾಣಬಹುದು, ಪರ್ವತದಲ್ಲೂ ಕಾಣಬಹುದು. ನನ್ನಲ್ಲಿ, ನಿಮ್ಮಲ್ಲಿ, ಪ್ರತಿಯೊಂದು ಜೀವಿಯಲ್ಲೂ ಕಾಣಬಹುದು. ನನ್ನಲ್ಲಿ ಭಗವಂತನನ್ನು ಕಾಣುವಾಗ ನಿಮ್ಮಲ್ಲಿ ಇಲ್ಲಾ ಎನ್ನ ಬೇಕೇ? ಅದೇ ಕಾಲದಲ್ಲಿ ಎಲ್ಲೆಲ್ಲೂ ಇರುವ ಆ ಶಕ್ತಿ ಬಗ್ಗೆ ನಾವು ಚರ್ಚೆ ಮಾಡಿದ್ದೇ ಮಾಡಿದ್ದು.
    ನಾನಂತೂ ಆಗೊಮ್ಮೆ ಈಗೊಮ್ಮೆ ಬೇಜಾರಾದಾಗಲೆಲ್ಲಾ ಮೂರ್ತಿ ಪೂಜೆ ಮಾಡುವೆ.ಬಾಯ್ತುಂಬಾ ವೇದಮಂತ್ರ ಹೇಳುವೆ. ಆನಂದವಾಗಿ ಆ ಸಮಯವನ್ನು ಕಳೆಯುವೆ. ನನ್ನನ್ನು ದಡ್ದನೆಂದಾದರೂ ಕರೆಯಿರಿ, ಪ್ರೈಮರಿ ಶಾಲೆಯ ವಿದ್ಯಾರ್ಥಿ ಎಂದಾದರೂ ಕರೆಯಿರಿ, ನೀವು ಏನೂ ಕರೆದರೂ ನನಗೇನೂ ಚಿಂತೆ ಇಲ್ಲಾ. ಆದರೆ ನನಗೆ ಸಿಗುವ ಆನಂದವನ್ನು ನಾನು ಪಡೆಯದೆ ಇರಲಾರೆ. ಹಾಗಂತಾ ನಾನು ದೇವರನ್ನು " ಭಗವಂತಾ ನನಗೆ ಐಶ್ವರ್ಯ ಕೊಡು, ಆರೋಗ್ಯ ಕೊಡು, ಎಂದೆಲ್ಲಾ ಕೇಳುವುದಿಲ್ಲ. ಅದನ್ನೆಲ್ಲಾ ನಾನು ಕೇಳದೆಯೂ ಕೊಟ್ಟಿದ್ದಾನೆ. ಅದನ್ನು ಉಳಿಸಿಕೊಳ್ಳುವುದು ನನ್ನ ಧರ್ಮ ,ಅಷ್ಟೆ. ಅಂದಹಾಗೆ ಈ ಮಾತುಗಳನ್ನು ಬರೆಸಿದವನೂ ಅವನೇ!!

    ಪ್ರತ್ಯುತ್ತರಅಳಿಸಿ
  5. << ನಾನು ನಿಮಗಿಂತ ಒಂದು ಮಟ್ಟ ಮೇಲಿದ್ದೀನೆಂದು ಹೇಳಿಕೊಂಡಂತಾಗುತ್ತದೆ.>>
    ಪ್ರಿಯ ಶ್ರೀಧರ್, ನನ್ನ ವೈಯಕ್ತಿಕ ಅಭಿಪ್ರಾಯ ನಿಮಗೆ ಈ ರೀತಿ ಅನ್ನಿಸಿದರೆ ವಿಷಾದಿಸುವೆ. ನೀವು ನಿಮ್ಮ ಅನಿಸಿಕೆ ಬರೆದಂತೆ ನಾನು ನನ್ನ ಅನಿಸಿಕೆ ಬರೆದೆನಷ್ಟೆ.ಇದರಲ್ಲಿ ಮೇಲು, ಕೆಳಗಿನ ಪ್ರಶ್ನೆ ಇಲ್ಲ. ಗುರಿಯ ಕಡೆಗೆ ಅಚಲ ಗಮನವಿದ್ದಲ್ಲಿ ಯಾವ ಮಾರ್ಗವಾದರೇನು? ಕೆಲವು ಹತ್ತಿರದ, ಕೆಲವು ದೂರದ, ಕೆಲವು ಬಳಸು ದಾರಿಗಳಷ್ಟೆ.ಅವರವರ ದಾರಿ ಅವರಿಗಿರಲಿ!!

    ಪ್ರತ್ಯುತ್ತರಅಳಿಸಿ
  6. "ವಿಷಾದ" ದ ಮಾತೇಕೆ ಸಾರ್, ಚರ್ಚೆ ಮಾಡುವುದು ಬೇಡವೇ? ಮನದೊಳಗಿರುವ ಭಾವನೆಯನ್ನು ಬಚ್ಚಿಡಲಾರೆ. ನಮ್ಮ ನಮ್ಮ ಭಾವನೆ ಹಂಚಿಕೊಳ್ಳೋಣ.

    ಪ್ರತ್ಯುತ್ತರಅಳಿಸಿ
  7. ಮೂರ್ತಿ ಪೂಜೆಯ ಪರ-ವಿರೋಧ ಚರ್ಚೆಗಳು ಈಗ ಹೊಸದಾಗಿ ಪ್ರಾರಂಭವಾದುದಲ್ಲ. ಶತ ಶತಮಾನಗಳಿಂದ ನಡೆದುಕೊಂಡು ಬಂದಿದೆ, ನಡೆಯುತ್ತಿರುತ್ತದೆ. ನಡೆಯುತ್ತಿರಲಿ. ಮಥನದಿಂದ ನಮಗೆ ಪ್ರಿಯವೆನಿಸುವುದನ್ನು ಆರಿಸಿಕೊಂಡರಾಯಿತು.

    ಪ್ರತ್ಯುತ್ತರಅಳಿಸಿ
  8. ಆತ್ಮೀಯ ಶ್ರೀಧರ್ ಮತ್ತು ಜಗದೀಶರೇ,
    ತಮ್ಮ ಪ್ರತಿಕ್ರಿಯೆಗಳ ನಂತರ ಈ ಲೇಖನವನ್ನು ಪುನಃ ಓದಿದೆ. ಇದರಲ್ಲಿ ಕಂಡು ಬಂದ ಅಂಶಗಳ ಸಾರವಿದು:
    1. ಮೂರ್ತಿರೂಪದಲ್ಲಿ ಪೂಜಿಸಲ್ಪಡುತ್ತಿರುವ ದೇವರ ಆಕಾರ, ರೂಪಗಳು ಮಾನವನ ಕಲ್ಪನೆಯಿಂದ ಮೂಡಿದ್ದಾಗಿದೆ.
    2. ದೇವರನ್ನು ಪೂಜಿಸುವ ವಿಚಾರ ಅಂತರಂಗದಲ್ಲಿ ಮೊದಲು ಬರಬೇಕು. ಅಂತರಂಗದಲ್ಲೆ ಬರದಿದ್ದರೆ ಯಾವ ರೀತಿ ಪೂಜಿಸಿದರೂ ವ್ಯರ್ಥ.
    3.ಸ್ತ್ರೀಯರಿಗೆ ವೇದಾಧ್ಯಯನ, ವೇದಮಂತ್ರಗಳ ಪಠಣದ ಕುರಿತು ಅಡ್ಡಿ ಮಾಡುವವರ ಕುರಿತು ಆಕ್ರೋಷ ವ್ಯಕ್ತವಾಗಿದೆ. ಇಲ್ಲಿ ಸ್ತ್ರೀಯರಿಗೂ ವೇದಮಂತ್ರ ಪಠಣಕ್ಕೆ ಅವಕಾಶವಾಗಬೇಕು ಎಂಬ ಭಾವ ಪ್ರಧಾನವಾಗಿ ಪರಿಗಣಿಸಬೇಕಿದೆ.
    ಮೇಲಿನ 3 ಸಂಗತಿಗಳ ಕುರಿತು ಅನಿಸಿಕೆ ತಿಳಿಸಲು ಕೋರುವೆ. ಚರ್ಚೆ ಮುಂದುವರೆಯಲಿ.ಚರ್ಚೆಯಲ್ಲಿ ಯಾರೊಬ್ಬರ ಗೆಲುವು, ಸೋಲು ಪ್ರಧಾನವಲ್ಲ. ಒಟ್ಟಾರೆ ವಿಷಯ ಅರಿಯಲು ಪ್ರಯತ್ನಿಸೋಣ.

    ಪ್ರತ್ಯುತ್ತರಅಳಿಸಿ