ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮೇ 16, 2011

ವೇದೋಕ್ತ ಜೀವನ ಪಥ: ಮಾನವ ಧರ್ಮ - 2,3

     ಅಥರ್ವವೇದ ಕೂಗಿ ಕೂಗಿ ಹೇಳುತ್ತಲಿದೆ:-

ಉತ್ಕ್ರಾಮಾತಃ ಪುರುಷ ಮಾವ ಪತ್ಥಾ ಮೃತ್ಯೋಃ ಪಡ್ವೀಶಮವಮುಂಚಮಾನಃ |

ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇಃ ಸೂರ್ಯಸ್ಯ ಸಂದೃಶಃ ||
(ಅಥರ್ವ.೮.೧.೪.)

     [ಪುರುಷ] ಹೇ ದೇಹನಿವಾಸೀ ಜೀವ! [ಮೃತ್ಯೋಃ ಪಡ್ವೀಷಂ ಅವಮುಂಚಮಾನಃ] ಸಾ"ನ ಬಂಧವನ್ನು ಕೆಳಕ್ಕೆ ಸರಿಸಿ ಹಾಕುತ್ತಾ, [ಆತಃ ಉತ್ಕ್ರಾಮ] ಇಲ್ಲಿಂದ ಮೇಲಕ್ಕೆದ್ದು ನಡೆ. [ಮಾ ಅವ ಪತ್ಥಾ] ಕೆಳಗೆ ಬೀಳಬೇಡ. [ಅಸ್ಮಾತ್ ಲೋಕಾತ್] ಈ ಲೋಕದಿಂದ, [ಮಾ ಚ್ಛಿತ್ಥಾ] ಕಡಿದು ಹೋಗಬೇಡ. [ಅಗ್ನೇಃ] ರಾತ್ರಿಯಲ್ಲಿ ಅಗ್ನಿಯ, [ಸೂರ್ಯಸ್ಯ] ಹಗಲಿನಲ್ಲಿ ಸೂರ್ಯನ, [ಸಂದೃಶಃ] ಸಮಾನವಾಗಿ ಪ್ರಕಾಶಿಸು.

     ಒಂದೊಂದು ಶಬ್ದವೂ ಸ್ಫೂರ್ತಿಯ ಬುಗ್ಗೆ! ಮಾನವ, ಸಾವಿನ ಭಯವನ್ನು ದೂರ ಸರಿಸಿ, ಮೇಲಕ್ಕೇರಬೇಕು, ಕೆಳಕ್ಕೆ ಬೀಳಬಾರದು. ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ, ಲೌಕಿಕ ಕರ್ತವ್ಯಗಳಿಂದ ದೂರ ಓಡಬಾರದು, ಜೀವನದ ರಾತ್ರಿಯಲ್ಲಿ ಅಂದರೆ ದುಃಖಮಯ ಸ್ಥಿತಿಯಲ್ಲಿ, ಬೆಂಕಿಯಂತೆ ಉರಿದು ದುಃಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ, ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ, ಎಲ್ಲರಿಗೂ ಆ ಸುಖವನ್ನು ಹಂಚಿಕೊಡಬೇಕು. ಇದೀಗ ಧರ್ಮಮಾರ್ಗದ, ಉತ್ಥಾನ ಮಾರ್ಗದ ಒಂದು ಆಕರ್ಷಕವಾದ ಚಿತ್ರ.
     ಅದೇ ಅಥರ್ವವೇದ ಮತ್ತೆ ಹೇಳುತ್ತಲಿದೆ:
ಉದ್ಯಾನಂ ತೇ ಪುರುಷ ನಾವಯಾನಂ ಜೀವಾತುಂ ತೇ ದಕ್ಷತಾತಿಂ ಕೃಣೋಮಿ |
ಆ ಹಿ ರೋಹೇಮಮಮೃತಂ ಸುಖಂ ರಥಮಥ ಜಿರ್ವಿರ್ವಿದಥಮಾ ವದಾಸಿ ||
(ಅಥರ್ವ. ೮.೧.೬.)
     [ಪುರುಷ] ಓ ದೇಹಧಾರಿ ಜೀವ! [ತೇ ಯಾನಂ ಉತ್] ನಿನ್ನ ಮಾರ್ಗ ಮೇಲಕ್ಕಿದೆ. [ನ ಆವಯಾನಮ್] ಕೆಳಕ್ಕೆ ಹೋಗುವುದಲ್ಲ. [ತೇ] ನಿನಗಾಗಿ, [ಜೀವಾತುಮ್] ಜೀವನಕಲೆಯನ್ನೂ, [ದಕ್ಷತಾತಿಮ್] ಜೀವನಸಾಮರ್ಥ್ಯವನ್ನೂ, [ಕೃಣೋಮಿ] ಉಂಟುಮಾಡುತ್ತೇನೆ. [ಇಮಮ್ ಅಮೃತಂ ಸುಖಂ ರಥಮ್] ಈ ಜೀವಂತವಾದ ಸುಖಕರವಾದ ಜೀವನರಥವನ್ನು, [ಹಿ ಆರೋಹ] ನಿಜವಾಗಿ ಏರು. [ಅಥ] ಆಮೇಲೆ [ಜಿರ್ವಿ] ವಾರ್ಧ್ಯಕ್ಯ ಪಡೆದು [ವಿದಥಮ್] ಜ್ಞೇಯವಾದ ಸತ್ಯಜ್ಞಾನವನ್ನು, [ಆ ವದಾಸಿ] ಪ್ರಸರಿಸುತ್ತಾ ಓಡಾಡುವೆ.
     ಹೌದು, ಧರ್ಮದ ಮಾರ್ಗ ಧಾರಕಮಾರ್ಗ, ಎತ್ತಿ ಹಿಡಿಯುವ ಮಾರ್ಗ. ಪತನಕ್ಕಿಲ್ಲಿ ಅವಕಾಶವೇ ಇಲ್ಲ. ಇಹದಲ್ಲಿ ಸೊಗಸಾಗಿ ಬಾಳಿ, ಇತರರನ್ನೂ ಸೊಗಸಾಗಿ ಬಾಳಿಸಿ, ಪರದಲ್ಲಿ ಅವಿಚ್ಛಿನ್ನ ಆನಂದವನ್ನು ಪಡೆದುಕೊಳ್ಳುವ ಜೀವನಕಲೆಯ ಮತ್ತು ಜೀವನಸಾಮರ್ಥ್ಯದ ದಿವ್ಯಮಾರ್ಗ. ನಾವು ಹಿಂದೆ ಹೇಳಿರುವಂತೆ, ಧರ್ಮವಿರುವುದು ಮಾನವ ಮಾತ್ರರಿಗೆಲ್ಲಾ ಒಂದೇ. ಅದು ಮತಗಳಂತೆ ಸಾವಿರಾರು ಇಲ್ಲ. ಆದರೂ ವೇದಗಳಲ್ಲಿ ಧರ್ಮ ಎಂಬ ಶಬ್ದವನ್ನು ಏಕವಚನ, ಬಹುವಚನ ಎರಡರಲ್ಲಿಯೂ ಬಳಸಲಾಗಿದೆ. ಉದಾಹರಣೆಗೆ, 'ತಾನಿ ಧರ್ಮಾಣಿ ಪ್ರಥಮಾನ್ಯಾಸನ್' (ಯಜು.೩೧.೧೬.) - ಅವು ಪ್ರಥಮ ಧರ್ಮಗಳಾದವು, ಎಂಬಲ್ಲಿ ಬಹುವಚನಪ್ರಯೋಗವಿದೆ. 'ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ'(ಋಕ್. ೫.೬೩.೭.) - ಧರ್ಮದಿಂದ ಸ್ನೇಹಪರ ಹಾಗೂ ವರಣೀಯ ನರ-ನಾರಿಯರು ಜ್ಞಾನಿಗಳಾಗುತ್ತರೆ, ಎಂಬಲ್ಲಿ ಏಕವಚನ ಪ್ರಯೋಗವಿದೆ. ಬಹುವಚನ ಪ್ರಯೋಗ ಕಂಡು ಪಾಠಕರು ವೇದಗಳು ಅನೇಕ ಧರ್ಮಗಳನ್ನು ಉಪದೇಶಿಸುತ್ತವೆ ಎಂದು ಭ್ರಾಂತರಾಗುವ ಸಂಭವವಿದೆ. ಆದರೆ, ಅಂತಹ ಭ್ರಾಂತಿಗೆ ಅವಕಾಶವಿಲ್ಲ. ಏಕೆಂದರೆ, ನಾವು ಈಗ ಯಾವ ಭಾವನೆಯನ್ನು ಧರ್ಮ ಎಂಬ ಶಬ್ದವನ್ನು ಗ್ರಹಿಸುತ್ತೇವೋ, ಅದನ್ನು ಸೂಚಿಸಲು ವೇದಗಳು ಋತ ಎಂಬ ಶಬ್ದವನ್ನು ಬಳಸುತ್ತವೆ. ಧರ್ಮ ಎಂಬ ಶಬ್ದದ ಅರ್ಥ ಧಾರಕ ಎಂದು. ವಸ್ತುತಃ ಸದ್ಗುಣವೇ ಧಾರಕತತ್ವ. ಅಂತಹ ಸದ್ಗುಣ ಒಂದೇ ಅಲ್ಲ ಇರುವುದು. ಅನೆಕ ಸದ್ಗುಣಗಳಿವೆ. ಯಾವುದಾದರೂ ಸದ್ಗುಣವನ್ನು ಸೂಚಿಸುವಾಗ ವೇದ ಧರ್ಮ ಎಂಬ ಶಬ್ದವನ್ನೂ, ಅನೇಕ ಧರ್ಮಗಳನ್ನು ಸೂಚಿಸಬೇಕಾದಾಗ ಧರ್ಮಗಳು ಎಂಬ ಶಬ್ದವನ್ನೂ ಉಪಯೋಗಿಸುತ್ತವೆ. ಎಲ್ಲ ಧರ್ಮಗಳು ಎಂದರೆ ಆತ್ಮೋದ್ಧಾರಕವಾದ ಸದ್ಗುಣಗಳ ಮೊತ್ತವನ್ನು, ಒಟ್ಟನ್ನು ಸೂಚಿಸುವಾಗ, ವೇದ ಋತ ಎಂಬ ವ್ಯಾಪಕ ಶಬ್ದವನ್ನು ಬಳಸುತ್ತದೆ. ವೇದಗಳ ಶೈಲಿಯಲ್ಲಿ ಧರ್ಮ ಒಂದು ಸದ್ಗುಣವಾದರೆ, ಋತ ಸಮಸ್ತ ಸದ್ಗುಣಗಳ ರಾಶಿ. ಸಾರ್ವಭೌಮ ಈಶ್ವರೀಯ ವಿಧಾನವೇ, ಆತ್ಮನ ಉನ್ನಾಯಕವಾದ ಜೀವನಕ್ರಮವೇ ಋತ. ಆ ಈಶ್ವರೀಯ ವಿಧಾನ ವೇದಗಳಲ್ಲಿ ಪ್ರಕಟವಾಗಿರುವುದರಿಂದ, ವೇದಗಳನ್ನೂ ಕೂಡ ಋತ ಎಂದು ನಿರ್ದೇಶಿಸುವುದುಂಟು. ಸುಲಭವಾದ ಮಾತುಗಳಲ್ಲಿ ಹೇಳಬೇಕಾದರೆ, ಆತ್ಮೋದ್ಧಾರದ ಸಮಸ್ತ ಸದ್ಗುಣಗಳ ಸಂಘಾತವೇ ಋತ, ಈಗಿನ ಬಳಕೆಯ ಮಾತಿನಲ್ಲಿ ಅದೇ ಧರ್ಮ. ಆ ಸದ್ಗುಣಗಳು ಜೀವನಕ್ಕಿಳಿದು ಬಂದಾಗ, ಅವೆಲ್ಲಾ ಸೇರಿ ಒಂದು ಜೀವನಮಾರ್ಗಕ್ಕೆ ರೂಪ ಕೊಡುತ್ತವೆ.
******************************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2011/04/blog-post_26.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ