ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ನವೆಂಬರ್ 29, 2010

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -9

     ಆ ಪರಮಾತ್ಮನು ಶುದ್ಧ, ಬುದ್ಧ, ಮುಕ್ತ ಸ್ವಭಾವನು. ಅವನೆಂದಿಗೂ ಅಶುದ್ಧನಾಗುವುದಿಲ್ಲ.
ಸಹಿ ಶುಚಿಃ ಶತಪತ್ರ ಸ ಶುಂಧ್ಯುಃ|| (ಋಕ್. ೭.೯೭.೭)
ಎಂದರೆ, [ಸ ಹಿ ಶುಚಿಃ] ಆ ಪ್ರಭುವೇ ನಿತ್ಯ ಶುದ್ಧನು. [ಶತಪತ್ರಃ] ನೂರಾರು ಬಗೆಯ ಪತನಗಳಿಂದ ದೂರವಿಟ್ಟು ರಕ್ಷಿಸುವವನು. [ಸ ಶುಂಧ್ಯುಃ] ಅವನೇ ಎಲ್ಲರನ್ನೂ ಪವಿತ್ರಗೊಳಿಸುವವನು - ಎಂದು ಋಗ್ವೇದವು ನಿರ್ದೇಶಿಸುತ್ತಲಿದೆ.
    ಆ ಪ್ರಭುವು ನಿತ್ಯಶುದ್ಧನೂ ಸದಾಜ್ಞಾನಿಯೂ ಆಗಿದ್ದಾನೆ. ಅವನೆಂದಿಗೂ ಭ್ರಾಂತನಾಗುವ ಪ್ರಶ್ನೆಯೇ ಇಲ್ಲ.
ಮೂರಾ ಅಮೂರ ನ ವಯಂ ಚಿಕಿತ್ವೋ ಮಹಿತ್ವಮಗ್ನೇ ತ್ವಮಂಗ ವಿತ್ಸೇ|| (ಋಕ್. ೧೦.೪.೪)
-ಎಂದರೆ [ಅಮೂರ] ಎಂದಿಗೂ ಮೋಹಕ್ಕೆ ಸಿಕ್ಕದಿರುವ [ಚಿಕಿತ್ವ] ನಿತ್ಯಜ್ಞಾನಿಯಾದ ಪ್ರಭುವೇ! [ಮೂರಾ ವಯಂ ನ] ಮೂಢರಾದ ನಮಗೆ ಏನೂ ತಿಳಿಯದು. [ಅಂಗ] ಪ್ರಿಯನೇ [ಮಹಿತ್ವಂ ತ್ವಂ ಏತ್ಸೇ] ಮಹತ್ವವನ್ನು ನೀನೇ ಬಲ್ಲೆ - ಎಂದು ಋಗ್ವೇದ ಹೇಳಿದೆ. 
     ಅದೇ ರೀತಿ ಭಗವಂತನು ನಿತ್ಯಮುಕ್ತನು, ಅವನೆಂದಿಗೂ ಯಾವ ಬಂಧನಕ್ಕೂ ಸಿಕ್ಕನು. ನಾವು ಅಥರ್ವವೇದದಲ್ಲಿ:
ಪ್ರಾಚೀದಿಗಗ್ನಿರಧಿಪತಿರಸಿತಃ|| (ಅಥರ್ವ. ೩.೨೭.೧) -
ಎಂದರೆ [ಪ್ರಾಚೀ ದಿಕ್] ಮುಂದುಗಡೆ [ಅಸಿತಃ] ಬಂಧನರಹಿತನಾದ, ನಿತ್ಯಮುಕ್ತನಾದ [ಅಗ್ನಿಃ ಅಧಿಪತಿಃ] ಜ್ಯೋತಿರ್ಮಯ ಪ್ರಭುವು ಅಧೀಶ್ವರನು - ಎಂಬ ಕಥನವಿದೆ.
     ಈರೀತಿ ವೇದೋಕ್ತ ಸಿದ್ಧಾಂತದಂತೆ ಪರಮಾತ್ಮನ ಗುಣಗಳು - ಸಚ್ಚಿದಾನಂದ; ಕರ್ಮಗಳು - ಸೃಷ್ಟಿ, ಸ್ಥಿತಿ, ಲಯ; ಸ್ವಭಾವ - ಶುದ್ಧತ್ವ, ಬುದ್ಧತ್ವ, ಮುಕ್ತತ್ವ. ಪರಮಾತ್ಮ ಸಾಕಾರ ವ್ಯಕ್ತಿಯಲ್ಲ, ನಿರಾಕಾರ ಚೇತನಶಕ್ತಿ. ಲಿಂಗ ಶರೀರದ ಲಕ್ಷಣ. ಪರಮಾತ್ಮನು ಅಶರೀರನಾದುದರಿಂದ, ಸ್ತ್ರೀ, ಪುರುಷ ಅಥವಾ ನಪುಂಸಕ ಲಿಂಗಗಳನ್ನು ಹಚ್ಚಲು ಸಾಧ್ಯವಿಲ್ಲ. ವೇದಗಳು ಈಶ್ವರೀಯವಾದರೂ, ನಮಗೆ ಮಾನವೀಯ ವಾಣಿಯಲ್ಲಿಯೇ ಬೋಧಿಸಬೇಕಾಗಿದೆ. ಅದೇ ಕಾರಣದಿಂದ ವೇದಗಳು ಪರಮಾತ್ಮನನ್ನು ಮೂರು ಲಿಂಗಗಳಲ್ಲಿಯೂ ನಿರ್ದೇಶಿಸುತ್ತವೆ.
ಸ ನೋ ಬಂಧುರ್ಜನಿತಾ ಸ ವಿಧಾತಾ|| (ಯಜು. ೩೨.೧೦)
-[ಸಃ] ಅವನೇ ನಿಯಾಮಕನು - ಎಂದು ಪುಲ್ಲಿಂಗದಲ್ಲಿ ಭಗವಂತನನ್ನು ನಿರ್ದೇಶಿಸಿದೆ.
ಸಾ ವಿಶ್ವಾಯುಃ ಸಾ ವಿಶ್ವಕರ್ಮಾ ಸಾ ವಿಶ್ವಧಾಯಾಃ|| (ಯಜು. ೧.೪)
-[ಸಾ] ಅವಳು [ವಿಶ್ವಾಯುಃ] ವಿಶ್ವದ ಪ್ರಾಣಸ್ವರೂಪಳು [ಸಾ ವಿಶ್ವಧಾಯಾಃ] ಅವಳು ವಿಶ್ವಾಧಾರಳು. ಇಲ್ಲಿ ಪರಮಾತ್ಮನನ್ನು ಸ್ತ್ರೀಲಿಂಗದಲ್ಲಿ ನಿರ್ದೇಶಿಸಲಾಗಿದೆ.
ತದೇವ ಶುಕ್ರಂ ತದ್ ಬ್ರಹ್ಮ|| (ಯಜು. ೩೨.೧)
[ತತ್ ಏವ] ಅದೇ [ಶುಕ್ರಂ] ತೇಜಸ್ವಿಯು [ತತ್] ಅದು [ಬ್ರಹ್ಮ] ಮಹತ್ತಾದುದು. ಇಲ್ಲಿ ನಿರ್ದೇಶ ನಪುಂಸಕ ಲಿಂಗದಲ್ಲಿರುವುದನ್ನು ಕಾಣುತ್ತೇವೆ. ಇದು ಕೇವಲ ಸೌಕರ್ಯದ ಪ್ರಯೋಗ. ವಸ್ತುತಃ ಪರಮಾತ್ಮನು ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ. ಮಾನವೀಯ ವಾಣಿಯಲ್ಲಿ ಹೇಳಬೇಕಾದರೆ ಯಾವುದಾದರೂ ಒಂದು ಲಿಂಗದಲ್ಲಿ ಹೇಳಲೇಬೇಕಾಗುವುದಲ್ಲವೇ?
     ಪರಮ ವೈಜ್ಞಾನಿಕವಾಗಿ ಹೇತುಗರ್ಭಿತವಾಗಿ ವೇದಗಳು ವಿಶ್ವಚೇತನವನ್ನು ವರ್ಣಿಸಿರುವುದು ಹೀಗೆ. ಇದಕ್ಕಿಂತ ಸ್ಫುಟವಾಗಿ ಭಗವಂತನನ್ನು ಯಾವ ಶಾಸ್ತ್ರವೂ ವರ್ಣಿಸುವುದಿಲ್ಲ. ಈ ಶಕ್ತಿಸ್ವರೂಪ ಪ್ರಭುವನ್ನು ಯಾವ ನಾಸ್ತಿಕನೂ ತಿರಸ್ಕರಿಸಲಾರನು. ಯಾವ ವೈಜ್ಞಾನಿಕನೂ ಅಲ್ಲ ಎನ್ನಲಾರನು. ಇಹದಲ್ಲಿ ಸುಖ-ಶಾಂತಿಗಳೂ, ಪರದಲ್ಲಿ ಆನಂದವೂ ಬೇಕಾದಲ್ಲಿ ಜೀವಾತ್ಮನು ಈ ಪರಮಾತ್ಮನ ಉಪಾಸನೆಯನ್ನೇ ಮಾಡಬೇಕು. ಯಾವ ಬಾಹ್ಯಪೂಜೆಯೂ ಪ್ರಭೂಪಾಸನೆಯಾಗಲಾರದು. ಮುಂದೆ ಉಪಾಸನಾ ವಿಷಯವನ್ನು ಚರ್ಚಿಸೋಣ.
-ಪಂ. ಸುಧಾಜರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ